ಸ್ಕಾರ್ಫ್ ವಿವಾದ: ವಿದ್ಯಾರ್ಥಿಗಳಿಂದ ಪ್ರತಿಭಟನೆ, ಮಾತುಕತೆಯಲ್ಲಿ ಇತ್ಯರ್ಥ
ಸುಳ್ಯ, ಮಾ.31: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಫೋಟೋ ಸೆಶನ್ ವೇಳೆ ಸ್ಕಾರ್ಫ್ ಧರಿಸದಂತೆ ನೀಡಿದ ಸೂಚನೆಯು ವಿವಾದಕ್ಕೆ ಕಾರಣವಾಗಿ ಕ್ಯಾಂಪಸ್ ಫ್ರಂಟ್ ಘಟಕದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಶೈಕ್ಷಣಿಕ ವರ್ಷದ ಕೊನೆಯಲ್ಲಿ ವಿದ್ಯಾರ್ಥಿಗಳ ಗ್ರೂಪ್ ಫೋಟೊ ತೆಗೆಯುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ತರಗತಿವಾರು ಫೋಟೊ, ಎನ್ನೆಸ್ಸೆಸ್, ಎನ್‌ಸಿಸಿ ಘಟಕಗಳ ಫೋಟೊ ತೆಗೆಯಲಾಯಿತು. ರೆಡ್‌ಕ್ರಾಸ್ ಯುವ ಘಟಕದ ಫೋಟೊ ತೆಗೆಯುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸದಂತೆ ಕಾರ್ಯಕ್ರಮಾಧಿಕಾರಿ ಡಾ.ಅನುರಾಧಾ ಕುರುಂಜಿ ಸೂಚಿಸಿ, ಸ್ಕಾರ್ಫ್ ತೆಗೆಯದಿದ್ದರೆ ಪ್ರಾಂಶುಪಾಲರಿಗೆ ದೂರು ನೀಡುವುದಾಗಿಯೂ ತಿಳಿಸಿದ್ದರು ಎನ್ನಲಾಗಿದೆ.
ಈ ವೇಳೆ ವಿದ್ಯಾರ್ಥಿನಿಯರು ಮತ್ತು ಅವರ ಜೊತೆಗಿದ್ದ ವಿದ್ಯಾರ್ಥಿಗಳು ಸ್ಕಾರ್ಫ್ ತೆಗೆಯಲು ನಿರಾಕರಿಸಿದರು ಎನ್ನಲಾಗಿದೆ. ಇದಕ್ಕೂ ಮುನ್ನ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿಯೇ ಫೋಟೊ ತೆಗೆದಿದ್ದು, ಈಗ ಸ್ಕಾರ್ಫ್ ತೆಗೆಸುವುದು ಸರಿಯಲ್ಲ ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿತ್ತು. ಬಳಿಕ ಫೋಟೊ ತೆಗೆಯುವುದನ್ನು ಸ್ಥಗಿತಗೊಳಿಸಲಾಯಿತು. ಈ ವಿಚಾರ ವಿವಾದಕ್ಕೆ ಕಾರಣವಾಗಿ ಕ್ಯಾಂಪಸ್ ಫ್ರಂಟ್‌ನ ಸುಳ್ಯ ಘಟಕದ ವಿದ್ಯಾರ್ಥಿಗಳು ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.
ಎಸೈ ಚಂದ್ರಶೇಖರ್, ಕ್ಯಾಂಪಸ್‌ನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಜವರೇ ಗೌಡ, ಪ್ರಾಂಶುಪಾಲ ಮೇಜರ್ ಗಿರಿಧರ ಗೌಡ, ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮುಖಂಡರು ಮತ್ತು ಯುವ ರೆಡ್‌ಕ್ರಾಸ್ ಘಟಕದ ವಿದ್ಯಾರ್ಥಿನಿಯರ ಜೊತೆ ಪ್ರಾಂಶುಪಾಲರು ಮಾತುಕತೆ ನಡೆಸಿದರು. ಈ ಮೂಲಕ ಪ್ರಕರಣಕ್ಕೆ ಸೌಹಾರ್ದಯುತವಾಗಿ ತೆರೆ ಎಳೆಯಲಾಯಿತು.
ಉಪನ್ಯಾಸಕಿ ತಮ್ಮ ಮುಂದೆ ಕ್ಷಮೆ ಕೇಳಬೇಕೆಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು. ಫೋಟೊ ತೆಗೆಯುವ ವೇಳೆ ಸ್ಕಾರ್ಫ್ ತೆಗೆಯಬೇಕೆಂದು ಯಾರೂ ಒತ್ತಾಯ ಮಾಡುವುದಿಲ್ಲ. ಮುಂದಕ್ಕೆ ಕಾಲೇಜಿನ ಆಡಳಿತ ಮಂಡಳಿ ಈ ಕುರಿತು ತೀರ್ಮಾನ ಕೈಗೊಳ್ಳುತ್ತದೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದುಕೊಂಡರು.







