ಕೋಲ್ಕತಾ: ಫ್ಲೈಓವರ್ ಕುಸಿದು 18 ಸಾವು

♦ ಕನಿಷ್ಠ 60 ಮಂದಿಗೆ ಗಾಯ ♦ ಹಲವರು ಅವಶೇಷಗಳಡಿಯಲ್ಲಿ
ಕೋಲ್ಕತಾ, ಮಾ.31: ಉತ್ತರ ಕೋಲ್ಕತಾದಲ್ಲಿನ ಜನನಿಬಿಡ ಬುರ್ರಾಬಾಝಾರ್ ಸಮೀಪದ ರಬೀಂದ್ರ ಸರಾನಿ-ಕೆ.ಕೆ.ಟಾಗೋರ್ ಸ್ಟ್ರೀಟ್ ಕ್ರಾಸಿಂಗ್ ಬಳಿ ನಿರ್ಮಾಣ ಹಂತದಲ್ಲಿರುವ ಎರಡು ಕಿ.ಮೀ. ಉದ್ದದ ಫ್ಲೈ ಓವರ್‌ನ ಸುಮಾರು 100 ಮೀಟರ್ ಉದ್ದದ ಭಾಗವೊಂದು ಗುರುವಾರ ಮಧ್ಯಾಹ್ನ ಕುಸಿದು ಬಿದ್ದ ಪರಿಣಾಮ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. 60 ಜನರು ಗಾಯಗೊಂಡಿದ್ದಾರೆ. ಇತರ ಹಲವಾರು ಜನರು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ವ್ಯಕ್ತವಾಗಿದೆ. ತನ್ಮಧ್ಯೆ,ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಹಲವಾರು ಗಾಯಾಳುಗಳನ್ನು ಅವಶೇಷಗಳಡಿಯಿಂದ ರಕ್ಷಿಸಿ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
‘ದೇವರ ಕೃತ್ಯ’!: ಹೈದರಾಬಾದ್‌ನ ಐವಿಆರ್‌ಸಿಲ್ ಕಂಪೆನಿಯು ಫ್ಲೈಓವರ್‌ನ ನಿರ್ಮಾಣ ಕಾಮಗಾರಿಯನ್ನು ನಡೆಸುತ್ತಿದ್ದು,ಅದರ ಕಳಪೆ ಕಾಮಗಾರಿಯ ಬಗ್ಗೆ ಸರ್ವತ್ರ ಆಕ್ರೋಶ, ಟೀಕೆಗಳು ವ್ಯಕ್ತವಾಗಿವೆ. ಇದರ ನಡುವೆಯೇ ‘ಇದು ದೇವರ ಕೃತ್ಯವಲ್ಲದೇ ಬೇರೇನೂ ಅಲ್ಲ’ ಎಂದು ಕಂಪೆನಿಯ ಹಿರಿಯ ಅಧಿಕಾರಿ ಪಾಂಡುರಂಗ ರಾವ್ ಹೇಳಿದ್ದಾರೆ.
ಕೋಲ್ಕತಾಕ್ಕೆ ಧಾವಿಸಿದ ಸಿಎಂ: ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತನ್ನ ಭೇಟಿಯನ್ನು ಮೊಟಕುಗೊಳಿಸಿ ನಗರಕ್ಕೆ ಧಾವಿಸಿದರಲ್ಲದೆ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಒಂದು ಬಸ್ ಸೇರಿದಂತೆ ಹಲವಾರು ಪ್ರಯಾಣಿಕ ವಾಹನಗಳೂ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿವೆ.
ಎನ್‌ಡಿಆರ್‌ಎಫ್,ಪೊಲೀಸ್,ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಭಾರೀ ಗಾತ್ರದ ಕ್ರೇನ್‌ಗಳು ಮತ್ತು ಇತರ ರಕ್ಷಣಾ ವಾಹನಗಳನ್ನು ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದೆ.
ಫ್ಯೈ ಓವರ್‌ನ ಕೆಳಭಾಗವನ್ನು ವಾಹನಗಳ ಪಾರ್ಕಿಂಗ್‌ಗಾಗಿ ಬಳಸಿಕೊಳ್ಳಲಾಗುತ್ತಿದ್ದು, ಹಲವಾರು ಸಣ್ಣಪುಟ್ಟ ವ್ಯಾಪಾರಿಗಳು ಇಲ್ಲಿ ವ್ಯಾಪಾರವನ್ನು ನಡೆಸುತ್ತಿದ್ದಾರೆ.







