ಡಝನ್ ಗ್ವಾಂಟನಾಮೊ ಕೈದಿಗಳು ಬೇರೆ ದೇಶಗಳಿಗೆ
ವಾಶಿಂಗ್ಟನ್, ಮಾ. 31: ಗ್ವಾಂಟನಾಮೊ ಸೇನಾ ಕಾರಾಗೃಹದಲ್ಲಿರುವ ಸುಮಾರು ಒಂದು ಡಝನ್ ಕೈದಿಗಳನ್ನು, ಅವರನ್ನು ಪಡೆದುಕೊಳ್ಳಲು ಒಪ್ಪಿಕೊಂಡಿರುವ ಕನಿಷ್ಠ ಎರಡು ದೇಶಗಳಿಗೆ ಹಸ್ತಾಂತರಿಸಲು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಉದ್ದೇಶಿಸಿದೆ ಎಂದು ಅಮೆರಿಕದ ಅಧಿಕಾರಿ ಯೊಬ್ಬರು ಬುಧವಾರ ತಿಳಿಸಿದ್ದಾರೆ.
ಅಟ್ಲಾಂಟಿಕ್ ಸಾಗರದ ಗ್ವಾಂಟನಾಮೊ ಕೊಲ್ಲಿಯಲ್ಲಿರುವ ಈ ಕಾರಾಗೃಹವನ್ನು ಮುಚ್ಚುವುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭರವಸೆ ನೀಡಿದ್ದು, ಮುಚ್ಚುವ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಾ ಬಂದಿದೆ. ಈಗ ಈ ಕೈದಿಗಳ ಹಸ್ತಾಂತರೊಂದಿಗೆ ಕಾರಾಗೃಹವನ್ನು ಸಂಪೂರ್ಣವಾಗಿ ಮುಚ್ಚಲು ಒಬಾಮ ಉದ್ದೇಶಿಸಿದ್ದಾರೆ.
ಮೊದಲ ಹಂತದ ಕೈದಿಗಳ ಹಸ್ತಾಂತರ ಕಾರ್ಯ ಮುಂದಿನ ಕೆಲವೇ ದಿನಗಳಲ್ಲಿ ನಡೆಯುವ ನಿರೀಕ್ಷೆಯಿದೆ. ಇತರರನ್ನು ಮುಂದಿನ ವಾರಗಳಲ್ಲಿ ಸ್ಥಳಾಂತರಿ ಸಲಾಗುವುದು ಎಂದು ಅಧಿಕಾರಿ ತಿಳಿಸಿದರು. ಸ್ಥಳಾಂತರಗೊಳ್ಳುವ ಕೈದಿಗಳಲ್ಲಿ ಯಮನ್‌ನ ತಾರಿಖ್ ಬಾ ಉದಾಹ್ ಸೇರಿದ್ದಾನೆ. ಆತ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಕೈಗೊಂಡಿದ್ದು, ಆತನ ದೇಹ ತೂಕ ಅರ್ಧಕ್ಕಿಳಿದಿದೆ.
ಕ್ಯೂಬದ ಗ್ವಾಂಟನಾಮೊ ಕೊಲ್ಲಿ ಯಲ್ಲಿರುವ ಅಮೆರಿಕದ ನೌಕಾ ನೆಲೆಯಲ್ಲಿ ಈಗ 91 ಕೈದಿಗಳಿದ್ದಾರೆ. ಅವರ ಪೈಕಿ ಹೆಚ್ಚಿನವರನ್ನು ಆರೋಪವೂ ಇಲ್ಲದೆ ವಿಚಾರಣೆಯೂ ಇಲ್ಲದೆ ದಶಕಕ್ಕೂ ಅಧಿಕ ಕಾಲ ಬಂಧನದಲ್ಲಿಡಲಾಗಿದೆ. ಇದಕ್ಕಾಗಿ ಅಮೆರಿಕ ಅಂತಾರಾಷ್ಟ್ರೀಯ ಖಂಡನೆಯನ್ನು ಎದುರಿಸುತ್ತಿದೆ.
ಗ್ವಾಂಟನಾಮೊ ಕಾರಾಗೃಹವನ್ನು ಮುಚ್ಚುವ ನೀಲ ನಕಾಶೆಯನ್ನು ಒಬಾಮ ಕಳೆದ ತಿಂಗಳು ಕಾಂಗ್ರೆಸ್‌ಗೆ ಸಲ್ಲಿಸಿದ್ದರು. ಜನವರಿಯಲ್ಲಿ ಅಧಿಕಾರದಿಂದ ಕೆಳಗಿಳಿಯುವ ಮುನ್ನ ತಾನು ನೀಡಿರುವ ಭರವಸೆಯನ್ನು ಸಂಪೂರ್ಣವಾಗಿ ಈಡೇರಿಸಲು ಅವರು ಉದ್ದೇಶಿಸಿದ್ದಾರೆ.
ಆದರೆ, ಈ ಕಾರ್ಯದಲ್ಲಿ ಅವರು ಹೆಚ್ಚಿನ ರಿಪಬ್ಲಿಕನ್ ಹಾಗೂ ಕೆಲವು ತನ್ನದೇ ಡೆಮಾಕ್ರಟಿಕ್ ಪಕ್ಷದ ಸಂಸದರಿಂದ ವಿರೋಧವನ್ನು ಎದುರಿಸುತ್ತಿದ್ದಾರೆ.





