ರೈಲುಗಳನ್ನು ಸ್ವಚ್ಛಗೊಳಿಸಲು ಅಂತರ್ಜಲ ಬಳಕೆ ರೈಲ್ವೆಗೆ ಹಸಿರು ನ್ಯಾಯಾಧಿಕರಣದ ನೋಟಿಸ್
ಹೊಸದಿಲ್ಲಿ,ಮಾ.31: ರೈಲು ಬೋಗಿಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಸ್ವಚ್ಛಗೊಳಿಸಲು ರೈಲ್ವೆ ಇಲಾಖೆಯು ಭಾರೀ ಪ್ರಮಾಣದಲ್ಲಿ ಅಂತರ್ಜಲವನ್ನು ಬಳಸುತ್ತಿರುವುದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ದ ಗಮನವನ್ನು ಸೆಳೆದಿದೆ. ರೈಲ್ವೆಯು ಮನಬಂದಂತೆ ಮತ್ತು ಅಕ್ರಮವಾಗಿ ಅಂತರ್ಜಲವನ್ನು ಬಳಸುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಗೆ ಎರಡು ವಾರಗಳಲ್ಲಿ ಉತ್ತರಿಸುವಂತೆ ನ್ಯಾ.ಸ್ವತಂತ್ರ ಕುಮಾರ್ ನೇತೃತ್ವದ ಪೀಠವು ರೈಲ್ವೆ ಮತ್ತು ಪರಿಸರ ಸಚಿವಾಲಯಗಳು ಹಾಗೂ ಕೇಂದ್ರೀಯ ಅಂತರ್ಜಲ ಪ್ರಾಧಿಕಾರ(ಸಿಜಿಡಬ್ಲೂಎ)ಕ್ಕೆ ಗುರುವಾರ ನೋಟಿಸುಗಳನ್ನು ಹೊರಡಿಸಿದೆ.
ಅಂತರ್ಜಲದ ಯದ್ವಾತದ್ವಾ ಬಳಕೆಯನ್ನು ನಿಲ್ಲಿಸಲು ನಿರ್ದೇಶನ ಕೋರಿ ಎನ್‌ಜಿಒ ಪರಿಸರ ಮತ್ತು ಜೀವವೈವಿಧ್ಯ ರಕ್ಷಣಾ ಸಂಘ ಮತ್ತು ಗಾಝಿಯಾಬಾದ್ ನಿವಾಸಿ ಸುಶೀಲ್ ರಾಘವ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಎನ್‌ಜಿಟಿ ಕೈಗೆತ್ತಿಕೊಂಡಿದೆ.
ಅಂತರ್ಜಲ ಬಳಕೆಗಾಗಿ ರೈಲ್ವೆಯು ಕಳೆದೊಂದು ದಶಕದಲ್ಲಿ ಸಿಜಿಡಬ್ಲೂಎನಿಂದ ಕೇವಲ ಮೂರು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ಕೋರಿದೆ. ಆದರೆ ಅದು ದೇಶಾದ್ಯಂತ ತನ್ನ ಸಿಬ್ಬಂದಿಯ ವಸತಿಗೃಹಗಳು ಸೇರಿದಂತೆ ಎಲ್ಲ ಉದ್ದೇಶಗಳಿಗಾಗಿ ಮನಬಂದಂತೆ ಮತ್ತು ಸಂಬಂಧಿತ ಅಧಿಕಾರಿಗಳ ಅನುಮತಿ ಪಡೆದುಕೊಳ್ಳದೆ ಅಕ್ರಮವಾಗಿ ಅಂತರ್ಜಲವನ್ನು ಬಳಸುತ್ತಿದೆ ಎಂದು ಆರೋಪಿಸಿರುವ ಅರ್ಜಿಯು, 16 ವಲಯಗಳಲ್ಲಿಯ ತನ್ನೆಲ್ಲ 73 ವಿಭಾಗಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಸ್ಥಾಪಿಸುವಂತೆ ಇಲಾಖೆಗೆ ನಿರ್ದೇಶ ನೀಡುವಂತೆ ಕೋರಿದೆ.
ನೀರಿನ ಪುನರ್ಬಳಕೆ,ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆ ಇತ್ಯಾದಿಗಳಿಗೂ ರೈಲ್ವೆಗೆ ನಿರ್ದೇಶಗಳನ್ನು ನೀಡುವಂತೆಯೂ ಅರ್ಜಿಯು ಕೋರಿದೆ.







