ಎನ್‌ಪಿಎಸ್‌ಗೆ ವಿರೋಧ: ಪುತ್ತೂರಿನಲ್ಲಿ ಸರ್ಕಾರಿ ನೌಕರರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ
ಕಾರ್ಡು ಚಳವಳಿ. ಕರಾಳ ದಿನ ಆಚರಣೆ

ಪುತ್ತೂರು: ನೌಕರರ ಇಳಿ ವಯಸ್ಸಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗಾಗಿ ರೂಪಿಸಿದ್ದ ನಿಶ್ಚಿತ ಪಿಂಚಣಿ ವ್ಯವಸ್ಥೆಯನ್ನು(ಎನ್‌ಪಿಎಸ್) ಬದಲಾಯಿಸಿ ಸರಕಾರ ನಿಶ್ಚಿತ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಕರ್ನಾಟಕ ರಾಜ್ಯದಾದ್ಯಂತ ಜಾರಿಗೆ ಬಂದ ವಂತಿಗೆ ಆಧಾರಿತ ಪಿಂಚಣಿ ಯೋಜನೆ ಜಾರಿ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ರಾಜ್ಯವ್ಯಾಪಿ ಕರಾಳ ದಿನ ಆಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನಾದ್ಯಂತ ನೌಕರರು ಕಪ್ಪು ಪಟ್ಟಿಯ ಕಾರ್ಡ್‌ನ ಬ್ಯಾಡ್ಜ್ ಹಾಕಿಕೊಂಡು ಕೆಲಸದಲ್ಲಿ ನಿರತರಾಗುವ ಮೂಲಕ ಕರಾಳ ದಿನವನ್ನಾಗಿ ಆಚರಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ (ರಿ) ಇದರ ಪುತ್ತೂರು ಘಟಕದ ಆಶ್ರಯದಲ್ಲಿ ಪುತ್ತೂರು ತಾಲೂಕಿನಾದ್ಯಂತ ವಿವಿಧ ಇಲಾಖೆಗಳ ನೌಕರರು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಅಂಚೆ ಕಾರ್ಡ್ ಹಾಕುವ ಮೂಲಕ ವಿಶಿಷ್ಟವಾಗಿ ಈ ಕರಾಳ ದಿನಾಚರಣೆಯನ್ನು ಆಚರಿಸಿದರು..
ಪುತ್ತೂರು ಮುಖ್ಯ ಪೋಸ್ಟ್ ಆಫೀಸಿನ ಬಳಿ ನಡೆದ ಪೋಸ್ಟ್ ಕಾರ್ಡ್ ಚಳುವಳಿಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ದಿನೇಶ್ ಮಾಚಾರ್ ಮಾತಾಡಿ ರಾಜ್ಯ ಸರಕಾರ ಜಾರಿಗೆ ತಂದ ಈ ಹೊಸ ಪಿಂಚಣಿ ಯೋಜನೆ ಸರಕಾರಿ ನೌಕರರಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸಿದ್ದು, ತಮ್ಮ ಭವಿಷ್ಯದ ಬಗ್ಗೆ ಆತಂಕ ಪಡುವಂತೆ ಮಾಡಿದೆ. ಇದರ ಮಾಹಿತಿಗಳೂ ಕೂಡ ಸರಿಯಾಗಿ ದೊರೆಯುತ್ತಿಲ್ಲ. ಇಂತಹ ನೌಕರ ವಿರೋಧಿ ವ್ಯವಸ್ಥೆ ರದ್ದುಗೊಳ್ಳುವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಆದರ್ಶ, ,ತಾಲೂಕು ಸಂಘಟನಾ ಕಾರ್ಯದರ್ಶಿಗಳಾದ ವೀಣಾ.ಕೆ, ಮಹಮ್ಮದ್ ಅಶ್ರಫ್ ವಿವಿಧ ಇಲಾಖೆಗಳ ಪ್ರತಿನಿಧಿಗಳಾದ ಮಲ್ಲಿಕ್ ಕುಮಾರ್, ಚಂದ್ರ ಕೊಟ್ಟಾರಿ, ಹರಿಪ್ರಸಾದ್, ಭಾಗ್ಯಲಕ್ಷ್ಮೀ, ನೇತ್ರಾವತಿ, ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತಾಲೂಕಿನ ಉಪ್ಪಿನಂಗಡಿ, ಕಡಬ, ಈಶ್ವರಮಂಗಲ, ಸವಣೂರು, ನೆಲ್ಯಾಡಿಗಳಲ್ಲಿ ಸಾಮೂಹಿಕವಾಗಿ ಪತ್ರಗಳನ್ನು ಅಂಚೆ ಡಬ್ಬಿಗೆ ಹಾಕುವ ಮೂಲಕ ಪೋಸ್ಟ್ ಕಾರ್ಡ್ ಚಳವಳಿಯನ್ನು ನಡೆಸಿದರು. ವಿಮಲ್ ಕುಮಾರ್ ನೆಲ್ಯಾಡಿ, ವೆಂಕಟೇಶ್ ಅನಂತಾಡಿ, ಇಬ್ರಾಹಿಂ ಎಂ, ಶಿವಕುಮಾರ್, ರಮೇಶ್ ಎಂ ಇವರುಗಳು ಆಯಾ ಸ್ಥಳಗಳ ಕಾರ್ಯಕ್ರಮಗಳನ್ನುಸಂಘಟಿಸಿದರು.







