ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಎ.4ರಂದು ಮೆಹಬೂಬ ಪ್ರಮಾಣ ವಚನ ಸ್ವೀಕಾರ

ಶ್ರೀನಗರ,ಎ.1: ಪಿಡಿಪಿ ಅಧ್ಯಕ್ಷೆ ಮೆಹಬೂಬ ಮಫ್ತಿ ಅವರು ಎ.4ರಂದು ಜಮ್ಮ-ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ ಎಂದು ಪಕ್ಷದ ನಾಯಕ ಅಮಿತಾಬ್ ಮಟ್ಟೂ ಅವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
56ರ ಹರೆಯದ ಮೆಹಬೂಬ ಈ ಪ್ರದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರಿಗೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದ ಮಟ್ಟೂ ಆಶಯ ವ್ಯಕ್ತಪಡಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ವಿಳಂಬಿಸುವಂತಹ ಯಾವುದಾದರೂ ಭಿನ್ನಾಭಿಪ್ರಾಯಗಳು ಮಿತ್ರಪಕ್ಷಗಳ ನಡುವೆ ಮೂಡಿದ್ದವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಿಡಿಪಿ ಮತ್ತು ಬಿಜೆಪಿ ಮೂಲಗಳು,ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ,ಆದರೆ ಮಾತುಕತೆಗಳಿಗೆ ಸಮಯಾವಕಾಶ ಬೇಕಾಗುತ್ತದೆ ಎಂದು ತಿಳಿಸಿದವು.
ಕಳೆದ ವರ್ಷದ ಮಾ.1ರಿಂದ ಹತ್ತು ತಿಂಗಳ ಕಾಲ ಪಿಡಿಪಿ-ಬಿಜೆಪಿ ಮೈತ್ರಿಕೂಟ ಸರಕಾರದ ನೇತೃತ್ವ ವಹಿಸಿದ್ದ ಸಯೀದ್ ಅವರು ಈ ವರ್ಷದ ಜ.7ರಂದು ನಿಧನರಾದ ಬಳಿಕ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಲು ಮೆಹಬೂಬ ಹಿಂದೇಟು ಹೊಡೆಯುತ್ತಲೇ ಬಂದಿದ್ದರು.
ಉಭಯ ಪಕ್ಷಗಳು ಕಳೆದ ವರ್ಷ ರೂಪಿಸಿಕೊಂಡಿದ್ದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಅನುಷ್ಠಾನ ಕುರಿತು ಕೇಂದ್ರ ಸರಕಾರದಿಂದ ಭರವಸೆಗಳನ್ನು ಅವರು ನಿರೀಕ್ಷಿಸುತ್ತಿದ್ದರು. ಅಲ್ಲದೆ ಜಮ್ಮು-ಕಾಶ್ಮೀರಕ್ಕೆ ನಿರ್ದಿಷ್ಟ ವಿಶ್ವಾಸ ನಿರ್ಮಾಣ ಕ್ರಮಗಳನ್ನೂ ಅವರು ಬಯಸಿದ್ದರು. ಮಾ.22ರಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಅವರ ಭೇಟಿಯು ರಾಜ್ಯದಲ್ಲಿ ಸರಕಾರ ರಚನೆ ಕುರಿತ ಬಿಕ್ಕಟ್ಟಿಗೆ ಅಂತ್ಯ ಹಾಡಿತ್ತು.







