ಬಾಲಕಿಯರು ‘ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ’ ಮಾಡಿದ್ದ ಶಾಂತಿ ಪಾಲಕರು

ವಿಶ್ವಸಂಸ್ಥೆ, ಎ. 1: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ (ಸಿಎಆರ್) ದೇಶದಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಸದಸ್ಯರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು 100ಕ್ಕೂ ಅಧಿಕ ಬಾಲಕಿಯರು ಮತ್ತು ಮಹಿಳೆಯರು ದೂರಿದ್ದಾರೆ ಎಂದು ವಿಶ್ವಸಂಸ್ಥೆ ಗುರುವಾರ ಹೇಳಿದೆ.
ಫ್ರೆಂಚ್ ಸೇನಾ ಕಮಾಂಡರ್ ಒಬ್ಬ ಮೂವರು ಬಾಲಕಿಯರನ್ನು ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಬಲವಂತಪಡಿಸಿದ ಎಂಬ ಆರೋಪ ‘‘ಅತ್ಯಂತ ಆಘಾತಕಾರಿಯಾಗಿದೆ’’ ಎಂದು ಅದು ಹೇಳಿದೆ.
ಜಗತ್ತಿನ ಸಂಘರ್ಷಪೀಡಿತ ದೇಶಗಳ ಜನರ ರಕ್ಷಣೆಗಾಗಿ ವಿಶ್ವಸಂಸ್ಥೆಯು ಕಳುಹಿಸುವ ಅಂತಾರಾಷ್ಟ್ರೀಯ ಸೈನಿಕರು ತಮ್ಮ ಉದ್ದೇಶವನ್ನು ಮರೆತು ಅಲ್ಲಿನ ಜನರ ಮೇಲೆ ದೌರ್ಜನ್ಯ ನಡೆಸುತ್ತಿರುವ ಹೀನ ಪ್ರವೃತ್ತಿಯನ್ನು ಈ ಹೊಸ ಆರೋಪಗಳು ಮತ್ತಷ್ಟು ದೃಢಪಡಿಸಿವೆ.
ಸಿಎಆರ್ ದೇಶದ ರಾಜಧಾನಿ ಬಂಗುಯಿಯ ಪೂರ್ವದಲ್ಲಿರುವ ಕೆಮೊ ರಾಜ್ಯದಲ್ಲಿ ವಿಶ್ವಸಂಸ್ಥೆಯ ತಂಡವೊಂದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 108 ಮಂದಿಯನ್ನು ಭೇಟಿ ಮಾಡಿತು ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದರು. ಈ ಪೈಕಿ ಹೆಚ್ಚಿನವರು ಅಪ್ರಾಪ್ತ ವಯಸ್ಸಿನ ಬಾಲಕಿಯರು.
ತಮ್ಮನ್ನು ಫ್ರೆಂಚ್ ಸೇನಾ ಶಿಬಿರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಸೈನಿಕರು ತಮ್ಮನ್ನು ಕಟ್ಟಿ ಹಾಕಿ ಬಟ್ಟೆ ಬಿಚ್ಚಿದರು ಹಾಗೂ ಅಲ್ಲಿನ ಸೇನಾಧಿಕಾರಿಯೊಬ್ಬ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ತಮ್ಮನ್ನು ಬಲವಂತಪಡಿಸಿದನು ಎಂಬುದಾಗಿ ಮೂವರು ಬಾಲಕಿಯರು ವಿಶ್ವಸಂಸ್ಥೆಗೆ ದೂರಿದ್ದಾರೆ ಎಂದು ಅಮೆರಿಕದ ಸಂಘಟನೆ ‘ಏಡ್ಸ್ ಫ್ರೀ ವರ್ಲ್ಡ್’ ವರದಿ ಮಾಡಿದೆ.
ಆದರೆ, ಇದನ್ನು ವಿಶ್ವಸಂಸ್ಥೆ ಖಚಿತಪಡಿಸುವುದಿಲ್ಲ ಎಂದು ಡುಜಾರಿಕ್ ತಿಳಿಸಿದರು.
ಆದಾಗ್ಯೂ, ಘಟನೆಯ ಬಗ್ಗೆ ತನಿಖೆ ಮುಂದುವರಿಯುತ್ತಿದೆ ಎಂದರು.







