ಪತ್ನಿಯ ಕೊಲೆ: ಪತಿ ಬಂಧನ
ದಾವಣಗೆರೆ, ಎ.1: ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ತನ್ನ ಪತ್ನಿಯನ್ನೇ ಕೊಲೆಗೈದ ಘಟನೆ ತಾಲೂಕಿನ ಆನಗೋಡು ಗ್ರಾಮದ ಬಳಿ ನಡೆದಿದೆ. ಮಹಿಳೆ ಭಾಗ್ಯಮ್ಮ (36) ಕೊಲೆಯಾದ ಮಹಿಳೆ. ಕಳೆದ ಎರಡು ತಿಂಗಳಿನಿಂದ ಭಾಗ್ಯಮ್ಮ ಹಾಗೂ ಪತಿ ಚಂದ್ರಪ್ಪನಡುವೆ ಜಗಳ ನಡೆಯುತ್ತಿದ್ದು, ಈ ನಡುವೆ ವಿಚ್ಛೇದನ ಪಡೆಯಲು ಇಚ್ಛಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ, ಪತಿ ಚಂದ್ರಪ್ಪಭಾಗ್ಯಮ್ಮಳನ್ನು ಮನೆಗೆ ಬರುವಂತೆ ಆಗಾಗ ಒತ್ತಾಯ ಮಾಡುತ್ತಿದ್ದ ಎನ್ನಲಾಗಿದೆ. ಮಾ. 29ರಂದು ಭಾಗ್ಯಮ್ಮಳ ಮನವೊಲಿಸಿದ ಚಂದ್ರಪ್ಪಆಕೆಯನ್ನು ನಗರದ ಹೊರವಲಯದ ಆನಗೋಡು ಗ್ರಾಮಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಭಾಗ್ಯಮ್ಮಳ ಸಾವಿನ ಬಗ್ಗೆ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ಆಕೆಯ ಪತಿ ಚಂದ್ರಪ್ಪ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಕೂಡಲೇ ಆತನನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣವನ್ನು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.





