ಕುಡಿಯುವ ನೀರಿನ ಸಮಸೆ್ಯ ಪರಿಹರಿಸಲು ಒತ್ತಾಯ

ಚಿಕ್ಕಮಗಳೂರು, ಎ.1: ಬಸ್ಕಲ್ ಗ್ರಾಪಂಗೆ ಸೇರಿದ ಹಲಸುಮನೆ ಗ್ರಾಮದ ಬಾರೆಮನೆ ಬಡಾವಣೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿ ಯುವ ಕಾಂಗ್ರೆಸ್ ಮುಖಂಡ ಜಿ.ವಿ.ಪವನ್ ನೇತೃತ್ವದಲ್ಲಿ ಜಿಪಂ ಸಿಇಒಗೆ ಗ್ರಾಮಸ್ಥರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಗ್ರಾಮದಲ್ಲಿ ಬೋರ್‌ವೆಲ್ ನೀರು ಸಂಪೂರ್ಣ ಕಲುಷಿತವಾಗಿದ್ದು, ಕುಡಿಯುವ ನೀರಿನಲ್ಲಿ ಕಬ್ಬಿಣದ ಪುಡಿ ಹಾಗೂ ಕೆಸರು ಬರುತ್ತಿದೆ. ಇದರಿಂದ ಜನರಿಗೆ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. ಜಿಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸೂಕ್ತವಾದ ಪೈಪ್ ಲೈನ್ ಅಳವಡಿಸಿ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿ, ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದರು.
ನಂತರ ಸಮಸ್ಯೆಯ ಕುರಿತು ವಿವರ ಪಡೆಯಲು ಗ್ರಾಮಕ್ಕೆ ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಜಿಪಂ ಇಂಜಿನಿಯರಿಂಗ್ ಸಹಾಯಕ ಕಾರ್ಯಪಾಲಕ ಅಭಿಯಂತರ ಗುರುಮೂರ್ತಿ ಹಾಗೂ ಸಹಾಯಕ ಅಭಿಯಂತರ ಕೃಷ್ಣಯ್ಯ ಸ್ಥಳಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಪವನ್ ಮಾತನಾಡಿ, ಜಿಪಂ ಅಧಿಕಾರಿಗಳು ಈ ವಿಷಯದಲ್ಲಿ ವಿಫಲತೆ ತೋರಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲು ಸೂಕ್ತ ಕ್ರಮಕ್ಕೆ ಮನವಿ ಮಾಡಲಾಗುವುದು. ಅಧಿಕಾರಿಗಳು ಈ ಸಂದರ್ಭದಲ್ಲಿ ಸ್ಥಳ ಪರಿಶೀಲಿಸಿ, 1,200 ಮೀ. ಪೈಪ್ ಲೈನ್ ಅಳವಡಿಸಿ ಕಿರು ನೀರು ಸರಬರಾಜು ಯೋಜನೆಯಡಿ ಕುಡಿಯುವ ನೀರನ್ನು ಒದಗಿಸಲು ಯೋಜನೆ ತಯಾರಿಸಿ ಕುಡಿಯುವ ನಿರ್ವಹಣಾ ಸಮಿತಿಗೆ ಮಂಜೂರಾತಿಗೆ ಕಳುಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಎನ್‌ಎಸ್‌ಯು ಮುಖಂಡ ಶ್ರೀಕಾಂತ್, ರಮೇಶ್ ಹಾಗೂ ಗ್ರಾಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.







