ಪ್ರತ್ಯೇಕ ಮಟ್ಕಾ ಪ್ರಕರಣ: ಆರು ಮಂದಿ ಸೆರೆ
ಚಿಕ್ಕಮಗಳೂರು, ಎ.1: ನಗರದ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಆಡಲು ಪ್ರೋತ್ಸಾಹಿಸುತ್ತಿದ್ದ ಹಿನ್ನೆಲೆಯಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಹಾಲೇನಹಳ್ಳಿ-ರಾಮನಹಳ್ಳಿ ಮಧ್ಯೆ ರಸ್ತೆ ಬದಿ ಅಕ್ರಮ ಮಟ್ಕಾ ಆಡಲು ಪ್ರೋತ್ಸಾಹಿಸುತ್ತಿದ್ದ ಯೂನುಸ್(34) ಮತ್ತು ಶಬ್ಬೀರ್(32) ಎಂಬವರನ್ನು ಬಂಧಿಸಿರುವ ಬಸವನಹಳ್ಳಿ ಪೊಲೀಸರು ಆರೋಪಿಗಳಿಂದ 985 ರೂ. ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕೆಇಬಿ ವೃತ್ತದ ಬಳಿ ಅಕ್ರಮ ಮಟ್ಕಾ ಆಡಲು ಪ್ರೋತ್ಸಾಹಿಸುತ್ತಿದ್ದ ರಾಜೇಶ್(38) ಮತ್ತು ದಿವಾಕರ್ ಭಟ್(59) ಎಂಬವರನ್ನು ಬಂಧಿಸಿದ ಬಸವನಹಳ್ಳಿ ಪೊಲೀಸರು ಆರೋಪಿಗಳಿಂದ 50,660 ರೂ. ನಗದು, ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಗೌರಿ ಕಾಲುವೆಯ ವಾಟರ್ ಟ್ಯಾಂಕ್ ಬಳಿ ಮಟ್ಕಾ ಆಡುತ್ತಿದ್ದ ಕರೀಂ(38) ಎಂಬಾತನನ್ನು ಬಂಧಿಸಿರುವ ಬಸವನಹಳ್ಳಿ ಪೊಲೀಸರು ಆರೋಪಿಯಿಂದ 1,355 ರೂ. ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ರಾಮನಹಳ್ಳಿ ಬಡಾವಣೆಯ ವೈಭವ್ ಹೊಟೇಲ್ ಬಳಿ ಮಟ್ಕಾ ಆಡುತ್ತಿದ್ದ ಮಧುಕುಮಾರ್(30) ಎಂಬಾತನನ್ನು ಬಂಧಿಸಿರುವ ಬಸವನಹಳ್ಳಿ ಪೊಲೀಸರು ಆರೋಪಿಯಿಂದ 420 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.





