ವಾಂಖೆಡೆಯಲ್ಲಿ 29 ವರ್ಷಗಳ ಬಳಿಕ ಮತ್ತೊಮ್ಮೆ ಭಾರತೀಯರಿಗೆ ಆಘಾತ
1987ರಲ್ಲಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ್ದ ಭಾರತ

ಮುಂಬೈ, ಎ.1 ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತದ ಕ್ರಿಕೆಟ್ ತಂಡ ಟ್ವೆಂಟಿ-20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಸೋತು ನಿರ್ಗಮಿಸುವುದರೊಂದಿಗೆ 29 ವರ್ಷಗಳ ಬಳಿಕ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ಉಂಟಾಗಿದೆ.
1987 ನ.5ರಂದು 50 ಓವರ್‌ಗಳ ವಿಶ್ವಕಪ್ ಸೆಮಿಫೈನಲ್‌ನಲ್ಲಿ 1983ರ ವಿಶ್ವ ಚಾಂಪಿಯನ್ ಭಾರತ ತಂಡ ಇಂಗ್ಲೆಂಡ್ ವಿರುದ್ಧ 35 ರನ್‌ಗಳ ಅಂತರದಿಂದ ಸೋತು ನಿರ್ಗಮಿಸಿತ್ತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಭಾರತಕ್ಕೆ ಇಂಗ್ಲೆಂಡ್ ಗೆಲುವಿಗೆ 255 ರನ್‌ಗಳ ಸವಾಲು ವಿಧಿಸಿತ್ತು. ಆರಂಭಿಕ ದಾಂಡಿಗ ಗ್ರಹಾಂ ಗೂಚ್ ಶತಕ(115) ಮತ್ತು ನಾಯಕ ಮೈಕ್ ಗ್ಯಾಟಿಂಗ್ ಅರ್ಧಶತಕ(56) ನೆರವಿನಲ್ಲಿ ಇಂಗ್ಲೆಂಡ್‌ನ ಸ್ಕೋರ್ 250ರ ಗಡಿ ದಾಟಿತ್ತು.
ಗೂಚ್ ಹೀರೊ: ಶತಕ ವೀರ ಗೂಚ್ ಮತ್ತು ಅರ್ಧಶತಕ ದಾಖಲಿಸಿದ್ದ ಗ್ಯಾಟಿಂಗ್‌ಗೆ ಮಣಿಂದರ್ ಸಿಂಗ್ ಪೆವಿಲಿಯನ್ ಹಾದಿ ತೋರಿಸಿದ್ದರೂ, ಅವರು ಮೂರನೆ ವಿಕೆಟ್‌ಗೆ ಜೊತೆಯಾಟದಲ್ಲಿ 117 ರನ್‌ಗಳನ್ನು ಕೊಳ್ಳೆ ಹೊಡೆದಿದ್ದರು. ಭಾರತದ ಪರ ಮುಹಮ್ಮದ್ ಅಝರುದ್ದೀನ್ ಗಳಿಸಿದ ಅರ್ಧಶತಕ(64) ಅಂದಿನ ಪಂದ್ಯದಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಆಗಿತ್ತು. ಇಂಗ್ಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 254 ರನ್ ಮಾಡಿತ್ತು. ಗೆಲುವಿಗೆ 255ರನ್‌ಗಳ ಸವಾಲನ್ನು ಪಡೆದ ಭಾರತ ಇಂಗ್ಲೆಂಡ್‌ನ ಹೆಮ್ಮಿಂಗ್ಸ್(52ಕ್ಕೆ 4) ಮತ್ತು ಫಾಸ್ಟೆರ್ (47ಕ್ಕೆ 3) ದಾಳಿಗೆ ಸಿಲುಕಿ 45.3 ಓವರ್‌ಗಳಲ್ಲಿ 219 ರನ್‌ಗಳಿಗೆ ಆಲೌಟಾಗಿತ್ತು. ಟೀಮ್ ಇಂಡಿಯಾದ ಈಗಿನ ನಿರ್ದೇಶಕ ರವಿ ಶಾಸ್ತ್ರಿ ಅಂದಿನ ಪಂದ್ಯದಲ್ಲಿ 21 ರನ್ ಗಳಿಸಿ ಹೆಮ್ಮಿಂಗ್ಸ್ ಎಸೆತದಲ್ಲಿ ವಿಕೆಟ್ ಕೀಪರ್ ಪಾಲ್ ಡೌಂಟೆನ್‌ಗೆ ಕ್ಯಾಚ್ ನೀಡುವುದರೊಂದಿಗೆ ವಾಂಖೆಂಡೆ ಸ್ಟೇಡಿಯಂನಲ್ಲಿ ವೌನ ಆವರಿಸಿತ್ತು.
ಸಾಕ್ಷಿಯಾದ ಶಾಸ್ತ್ರಿ: ಕಪಿಲ್ ದೇವ್ ನಾಯಕತ್ವದ ಚಾಂಪಿಯನ್ ತಂಡ ಕೂಟದಿಂದ ಹೊರಬಿದ್ದಾಗ ತಂಡದಲ್ಲಿ ಆಲ್‌ರೌಂಡರ್ ಶಾಸ್ತ್ರಿ ಕಳೆದ ರಾತ್ರಿ ಭಾರತದ ಸೋಲಿಗೆ ಸಾಕ್ಷಿಯಾದರು. ಅಂದಿನ ಪಂದ್ಯದಲ್ಲಿ ಉಭಯ ತಂಡದ ಯಾವನೇ ಒಬ್ಬ ಬ್ಯಾಟ್ಸ್‌ಮನ್‌ಗೂ ಸಿಕ್ಸರ್ ಬಾರಿಸಲು ಸಾಧ್ಯವಾಗಲಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಭಾರತದಿಂದ 4 ಮತ್ತು ವಿಂಡೀಸ್ ಪರ 11 ಸಿಕ್ಸರ್ ದಾಖಲಾಗಿತ್ತು ಎನ್ನುವುದು ವಿಶೇಷ.
ಅಂದು ಗ್ರಹಾಂ ಗೂಚ್ ಇಂದು ಲಿಂಡ್ಲ್ ಸಿಮನ್ಸ್ ಭಾರತದ ಗೆಲುವನ್ನು ಕಿತ್ತುಕೊಂಡರು. ಸಿಮನ್ಸ್‌ಗೆ ನೋ ಬಾಲ್‌ನಲ್ಲಿ ಸಿಕ್ಕಿದ ಎರಡು ಜೀವದಾನ ಭಾರತದ ಪಾಲಿಗೆ ದುಬಾರಿಯಾಯಿತು.
ನೋ ಬಾಲ್ ವಿಲನ್‌ಗಳು: ಭಾರತ ಕಳೆದ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 192 ರನ್ ದಾಖಲಿಸಿತ್ತು. ಇದೊಂದು ಕಠಿಣ ಸವಾಲು. ಆದರೆ ಗಾಯಾಳು ಫ್ಲೆಚರ್ ಬದಲಿಗೆ ತಂಡವನ್ನು ಸೇರಿಕೊಂಡಿದ್ದ ಲೆಂಡ್ಲ್ ಸಿಮನ್ಸ್‌ಗೆ ಎರಡು ಜೀವದಾನ ನೀಡಿ ಅವರಿಗೆ ಔಟಾಗದೆ 82 ರನ್ ಗಳಿಸಲು ಅವಕಾಶ ನೀಡಿದ ನೋಬಾಲ್ ವಿಲನ್‌ಗಳಿಬ್ಬರನ್ನು ಭಾರತೀಯರು ಮರೆಯಲಾರರು. ಅನುಭವಿ ಭಾರತದ ಸ್ಟಾರ್ ಸ್ಪಿನ್ನರ್ ರವಿಂದ್ರನ್ ಅಶ್ವಿನ್ ಮತ್ತು ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿಗೆ ನೆರವಾದ ಹಾರ್ದಿಕ್ ಪಾಂಡ್ಯ ವಿಲನ್ ಹಣೆಪಟ್ಟಿಯನ್ನು ಕಟ್ಟಿಕೊಂಡವರು.
6.5ನೆ ಓವರ್‌ನಲ್ಲಿ ಅಶ್ವಿನ್ ಎಸೆತದಲ್ಲಿ ಸಿಮನ್ಸ್ ಬೌಂಡರಿಗಟ್ಟುವ ಪ್ರಯತ್ನ ನಡೆಸಿದ್ದರು. ಆದರೆ ಆದರೆ ಬುಮ್ರಾ ಈ ಕ್ಯಾಚ್‌ನ್ನು ಅದ್ಬುತವಾಗಿ ಪಡೆದಿದ್ದರು. ಸಿಮನ್ಸ್ ಔಟ್ ಎಂದು ಎಲ್ಲರೂ ಭಾವಿಸುತ್ತಿದ್ದಂತೆ , ಅಶ್ವಿನ್ ಎಸೆದಿರುವುದು ನೋಬಾಲ್ ಹೀಗಾಗಿ ಸಿಮನ್ಸ್ ಜೀವದಾನ ಪಡೆದರು. ಆಗ ಅವರ ಸ್ಕೋರ್ 18 ಆಗಿತ್ತು.
ಸಿಮನ್ಸ್ ಅರ್ಧಶತ ದಾಖಲಿಸಿದ ಬಳಿಕ 14.6ನೆ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯಾರ ಫುಲ್‌ಟಾಸ್ ಎಸೆತವನ್ನು ತಪ್ಪಾಗಿ ಗಹಿಸಿದ್ದ ಸಿಮನ್ಸ್ ಸಮರ್ಥವಾಗಿ ನಿಭಾಯಿಸುವಿಲ್ಲಿ ವಿಫಲವಾಗಿ ಕವರ್‌ನಲ್ಲಿದ್ದ ಅಶ್ವಿನ್‌ಗೆ ಕ್ಯಾಚ್ ನೀಡಿದರು. ಆದರೆ ಅದು ನೋಬಾಲ್. ಸಿಮನ್ಸ್‌ಗೆ ಇನ್ನೊಂದು ಜೀವದಾನ ತಂಡದ ಖಾತೆಗೆ ಇತರೆ ರನ್. ಮುಂದೆ ಫ್ರೀ ಹಿಟ್‌ನಲ್ಲಿ ಚೆಂಡನ್ನು ಸಿಕ್ಸರ್‌ಗೆ ಅಟ್ಟುವ ಮೂಲಕತಂಡದ ಸ್ಕೋರ್‌ನ್ನು 15 ಓವರ್‌ಗಳಲ್ಲಿ 138ಕ್ಕೆ ಏರಿಸಿದ್ದರು. ಬಳಿಕ 28 ಎಸೆತಗಳಲ್ಲಿ 58 ರನ್ ಕಬಳಿಸಿ ವಿಂಡೀಸ್‌ನ್ನು ಗೆಲುವಿನ ದಡ ಸೇರಿಸಿದರು.
ಸಿಮನ್ಸ್ ಔಟಾಗದೆ 82 ರನ್(51ಎ, 7ಬೌ,5ಸಿ) ಮತ್ತು ರಸೆಲ್ ಔಟಾಗದೆ 43 ರನ್(್20ಎ, 3ಬೌ,4ಸಿ) ಗಳಿಸಿದರು. ಇವರು ನಾಲ್ಕನೆ ವಿಕೆಟ್‌ಗೆ 6.3 ಓವರ್‌ಗಳಲ್ಲಿ 12.30 ಸರಾಸರಿಯಂತೆ 80 ರನ್ ಗಳಿಸಿ ವಿಂಡೀಸ್‌ಗೆ ಮತ್ತೊಮ್ಮೆ ಫೈನಲ್‌ಗೆ ಹಾದಿ ತೋರಿಸಿದರು.







