ಸ್ಯಾಂಕಿ ಕೆರೆ ಒತ್ತುವರಿ ತೆರವಿಗೆ ಕ್ರಮ: ಸಿದ್ದರಾಮಯ್ಯ ಭರವಸೆ

ಬೆಂಗಳೂರು, ಎ. 1: ನಗರದ ಸ್ಯಾಂಕಿ ಕೆರೆ ಸುತ್ತಮುತ್ತಲು ಆಗಿರುವ ಸರಕಾರಿ ಭೂಮಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದ ನಿಯೋಗದ ಜತೆ ಸಮಾಲೋಚನೆ ಬಳಿಕ ಮಾತನಾಡಿದ ಅವರು, ಈ ಸಂಬಂಧ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದ ಸ್ಯಾಂಕಿ ಕೆರೆ ಸುತ್ತಮುತ್ತಲಿನ ಭೂಮಿ ಒತ್ತುವರಿ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದ ಸಿದ್ದರಾಮಯ್ಯ, ಸ್ಯಾಂಕಿ ಕೆರೆ ಭೂಮಿ ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸ್ಯಾಂಕಿ ಕೆರೆ ಸುತ್ತಮುತ್ತ ಅರಣ್ಯ ಇಲಾಖೆಗೆ ಸೇರಿದ ಜಾಗವಿದೆ. ಆದರೆ, ಕೆಲ ಖಾಸಗಿ ವ್ಯಕ್ತಿಗಳು ಆ ಭೂಮಿಯನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಇದಕ್ಕೆ ಬಿಡಿಎ ಮತ್ತು ಬಿಬಿಎಂಪಿ ಕೆಲ ಅಧಿಕಾರಿಗಳು ಸರಕಾರಿ ಭೂಮಿಯನ್ನು ಅಕ್ರಮ ಪರಭಾರೆಗೆ ಸಹಕಾರ ನೀಡಿದ್ದು, ಆ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ಶೆಟ್ಟರ್ ನೇತೃತ್ವದ ನಿಯೋಗ ಮನವಿ ಮಾಡಿತು.





