ಆರ್‌ಟಿಇ ದುರುಪಯೋಗ ಕಡಿವಾಣಕ್ಕೆ ಪ್ರತ್ಯೇಕ ಜಾಗೃತ ದಳ: ದಿನೇಶ್ ಗುಂಡೂರಾವ್

ಬೆಂಗಳೂರು, ಎ.1: ಶಿಕ್ಷಣ ಹಕ್ಕು ಕಾಯಿದೆ(ಆರ್‌ಟಿಇ)ಯ ದುರುಪಯೋಗಕ್ಕೆ ಕಡಿವಾಣ ಹಾಕಲು ಪ್ರತ್ಯೇಕ ಜಾಗೃತ ದಳವನ್ನು ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್‌ಗುಂಡೂರಾವ್ ಭರವಸೆ ನೀಡಿದ್ದಾರೆ.
ಶುಕ್ರವಾರ ನಗರದ ಎ.ವಿ.ವರದಾಚಾರ್ ಕಲಾ ಕ್ಷೇತ್ರದಲ್ಲಿ ಆರ್‌ಟಿಇ ಸ್ಟೂಡೆಂಟ್ಸ್ ಅಂಡ್ ಪೇರೆಂಟ್ಸ್‌ಅಸೋಸಿಯೇಶನ್ ಆಯೋಜಿಸಿದ್ದ ಆರ್‌ಟಿಇ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆರ್ಥಿಕ ದುರ್ಬಲರು, ಅಲ್ಪಸಂಖ್ಯಾತರು ಮತ್ತುದಲಿತರಿಗೆ ಉಚಿತ ಶಿಕ್ಷಣ ನೀಡುವ ಸದುದ್ದೇಶದಿಂದ ಯುಪಿಎ ಸರಕಾರ ಆರ್‌ಟಿಇ ಕಾಯ್ದೆಯನ್ನು ಅನುಷ್ಠಾನಗೊಳಿಸಿತ್ತು. ಆದರೆ ಈ ಕಾಯ್ದೆ ಇಂದು ಉಳ್ಳವರ ಪಾಲಾಗುವ ಮೂಲಕ ದುರುಪಯೋಗವಾಗುತ್ತಿದೆ. ಈ ಪರಿಣಾಮ ಬಡವರು ಮತ್ತು ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆರ್‌ಟಿಇ ನಿಯಮದ ಪ್ರಕಾರ ಖಾಸಗಿ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ಮತ್ತು ದಲಿತರಿಗೆ ಮೀಸಲಿಟ್ಟಿರಬೇಕು ಎಂದು ಆದೇಶವಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ ಮತ್ತು ತಾತ್ಸಾರ ಮನೋಭಾವದಿಂದ ಅರ್ಹ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ ಎಂದು ಆತಂಕಪಟ್ಟರು.
ಅರ್ಹ ಫಲಾನುಭವಿಗಳಿಗೆ ಮಾತ್ರ ಆರ್‌ಟಿಇ ಕಾಯಿದೆ ಅಡಿಯ ಸೀಟುಗಳು ದೊರಕಬೇಕು. ಹಾಗೂ ಈ ಕಾಯ್ದೆಯ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಪ್ರತ್ಯೇಕ ಜಾಗೃತದಳವನ್ನು ರಚಿಸಿಲು ಸಂಬಂಧಪಟ್ಟ ಸಚಿವ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸರಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್‌ಟಿಇ ಸ್ಟೂಡೆಂಟ್ಸ್‌ಆಂಡ್ ಪೇರೆಂಟ್ಸ್ ಅಸೋಸಿಯೇಶನ್‌ನ ಪ್ರಧಾನಕಾರ್ಯದರ್ಶಿ ಬಿ.ಎನ್.ಯೋಗಾನಂದ್ ಮಾತ ನಾಡಿ, ಆರ್‌ಟಿಇ ಕಾಯಿದೆಯ ಅಡಿ ಮೀಸಲಿಟ್ಟಿರುವ ಸೀಟುಗಳು ಅನರ್ಹರ ಪಾಲಾಗದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೆಯೇ ಸರಕಾರ ಕೂಡಲೆ ಆರ್‌ಟಿಇ ಜಾಗೃತದಳವನ್ನು ರಚಿಸಬೇಕು. ಈ ದಳಕ್ಕೆ ಶಾಸನಬದ್ಧ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ 2009ರ ಎ.1ರಂದು ಆರ್‌ಟಿಇ ಕಾಯಿದೆ ಅನುಷ್ಠಾನಗೊಳಿಸಿದ ಜ್ಞಾಪಕಾರ್ಥವಾಗಿ ದೇಶಾದ್ಯಂತ ಪ್ರತಿ ವರ್ಷ ಎ.1ರಂದು ಆರ್‌ಟಿಇ ದಿನಾಚರಣೆಯನ್ನು ಸರಕಾರವೇ ಆಯೋಜಿಸಬೇಕು. ಈ ಮೂಲಕ ಆರ್‌ಟಿಇ ಕಾಯಿದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಮಮತಾ ವೆಂಕಟೇಶ್, ಚಂದ್ರಕಲಾ ಗಿರೀಶ್‌ಲಕ್ಕಣ್ಣ, ಪಳಿನಿಕಾಂತ್, ಪದ್ಮಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.





