ಹೈದರಾಬಾದ್ ವಿವಿಯಲ್ಲಿ ಮತ್ತೆ ಉದ್ವಿಗ್ನತೆ
ವಿದ್ಯಾರ್ಥಿಗಳ ಪ್ರತಿಭಟನೆ
ಹೈದರಾಬಾದ್, ಎ.1: ಜನವರಿಯಲ್ಲಿ ದಲಿತ ಸಂಶೋಧನ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆಗೆ ಕಾರಣವೆಂದು ಆರೋಪಿಸಲಾಗಿರುವ ಉಪ ಕುಲಪತಿ ಪಿ.ಅಪ್ಪಾರಾವ್ ಅವರನ್ನು ತಕ್ಷಣವೇ ವಜಾಗೊಳಿಸಿ ಬಂಧಿಸಬೇಕೆಂದು ಆಗ್ರಹಿಸಿ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಶುಕ್ರವಾರ ಆಡಳಿತ ಭವನದ ಮುಂದೆ ಪ್ರತಿಭಟನೆಯೊಂದನ್ನು ಆರಂಭಿಸಿದ್ದಾರೆ.
ಪ್ರತಿಭಟನಾಕಾರರು ಕಟ್ಟಡದ ಪ್ರವೇಶ ದ್ವಾರವನ್ನು ತಡೆದು, ಸಿಬ್ಬಂದಿ ಒಳಗೆ ಪ್ರವೇಶಿಸದಂತೆ ಮಾಡಿದರು. ಕೆಲವು ಸಿಬ್ಬಂದಿ ಹಿಂಬಾಗಿಲ ಮೂಲಕ ಕಚೇರಿಗೆ ಪ್ರವೇಶಿಲು ಯಶಸ್ವಿಯಾದರು. ಆದರೆ, ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ.
ವೇಮುಲಾರ ಸ್ಮಾರಕವೊಂದನ್ನು ಧ್ವಂಸಗೊಳಿಸಲು ವಿವಿ ಅಧಿಕಾರಿಗಳು ನಿರ್ಧರಿಸಿದ ಮರುದಿನವೇ ಈ ಪ್ರತಿಭಟನೆ ಆರಂಭವಾಗಿದೆ.
ವಿವಿಯ ಅಧಿಕಾರಿಗಳು ಎಲ್ಲ ವಿದ್ಯಾರ್ಥಿಗಳ ವಿರುದ್ಧದ ಆರೋಪಗಳನ್ನು ಕೈಬಿಡಬೇಕು ಹಾಗೂ ವಿವಿಯ ಬಾಗಿಲುಗಳನ್ನು ಮಾಧ್ಯಮಗಳು ಹಾಗೂ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಮಾ.22ರಂದು ವಿದ್ಯಾರ್ಥಿಗಳ ಮೇಲೆ ‘ಗುರಿಯಿಟ್ಟ ಹಿಂಸಾಚಾರಕ್ಕೆ’ ಹೊಣೆಗಾರರಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಕ್ರಿಯಾ ಸಮಿತಿ ಆಗ್ರಹಿಸಿದೆ.
ತಡೆಯನ್ನು ಕೊನೆಗೊಳಿಸುವುದಕ್ಕಾಗಿ ವಿವಿಯ ಭದ್ರತೆಯು ಪೊಲೀಸರ ಸಹಾಯವನ್ನು ಕೋರಿದೆ.
ರಜೆಯ ಮೇಲೆ ತೆರಳಿದ ಉಪಕುಲಪತಿ ಅಪ್ಪಾರಾವ್‌ರ ಪುನರಾಗಮನವನ್ನು ವಿರೋಧಿಸಿದ್ದ ವಿದ್ಯಾರ್ಥಿಗಳ ಗುಂಪೊಂದು ಮಾ.22ರಂದು ಅವರ ನಿವಾಸದಲ್ಲಿ ದಾಂಧಲೆ ನಡೆಸಿ ಪೊಲೀಸರತ್ತ ಕಲ್ಲುಗಳನ್ನೆಸೆದಿದ್ದರು. ಈ ಸಂಬಂಧ 25 ವಿದ್ಯಾರ್ಥಿಗಳನ್ನು ಹಾಗೂ ಇಬ್ಬರು ಪ್ರಾಧ್ಯಾಪಕರನ್ನು ಬಂಧಿಸಿ, ಮಂಗಳವಾರ ಬಿಡುಗಡೆ ಮಾಡಲಾಗಿತ್ತು. ಅಪ್ಪಾರಾವ್ ಅವರನ್ನು ವಜಾ ಮಾಡುವವರೆಗೆ ಪ್ರತಿಭಟನೆ ತೀವ್ರಗೊಳಿಸುವ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳು ಕೈಗೊಂಡಿದ್ದರು.
ವಿವಿಗೆ ಸಂಬಂಧಿಸಿದ ವಿವಾದ ಪರಿಹಾರ ಹಾಗೂ ಉಪಕುಲಪತಿ ಉಚ್ಚಾಟನೆ ಖಚಿತಗೊಳಿಸಲು ವಿದ್ಯಾರ್ಥಿ ಸಂಘಟನೆಯು, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮಧ್ಯಪ್ರವೇಶಿಸುವಂತೆಯೂ ಕೋರಿತ್ತು.





