ಮುಸ್ಲಿಂ ಐಎಎಸ್ ಅಧಿಕಾರಿಯ ವಿರುದ್ಧ ಜಾರ್ಖಂಡ್ ಸರಕಾರದ ತಾರತಮ್ಯ
ಕುಟುಂಬದ ಆರೋಪ
ರಾಂಚಿ, ಎ.1: ಜಾರ್ಖಂಡ್ ರಘುವರದಾಸ್ ನೇತೃತ್ವದ ಸರಕಾರವು ಅಲ್ಪ ಸಂಖ್ಯಾತನೆಂಬ ಕಾರಣಕ್ಕಾಗಿ ಮುಸ್ಲಿಂ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ತಾರತಮ್ಯ ನೀತಿ ಅನುಸರಿಸುತ್ತಿದೆಯೆಂದು ಅಧಿಕಾರಿಯ ಕುಟುಂಬ ಆರೋಪಿಸಿದೆ. ಅವರಿಗೆ ಉತ್ತಮ ಹುದ್ದೆಗಾಗಿ ಅಭಿಯಾನವೊಂದನ್ನೂ ಅದು ಆರಂಭಿಸಿದೆ.
ಅಬು ಇಮ್ರಾನ್ ಎಂಬ 2010ರ ತಂಡದ ಐಎಎಸ್ ಅಧಿಕಾರಿ ಕಳೆದೊಂದು ವರ್ಷದಿಂದ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಅದಕ್ಕೆ ಮುನ್ನ ಹುದ್ದೆಗಾಗಿ ಅವರನ್ನು ಕೆಲವು ತಿಂಗಳ ಕಾಲ ಕಾಯುವಿಕೆಯಲ್ಲಿರಿಸಲಾಗಿತ್ತು.
ಈ ಹುದ್ದೆಯು ಸರಕಾರದ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ಹೆಚ್ಚು ಕ್ಷೇತ್ರ ಸಂದರ್ಶನ ಮಾಡಲಾಗದ ಹಿರಿಯ ಅಧಿಕಾರಿಗಳಿಗೆ ಸಾಮಾನ್ಯವಾಗಿ ನೀಡುವಂತಹದಾಗಿದೆಯೆಂಬುದು ಇಮ್ರಾನ್ ಕುಟುಂಬದ ಪ್ರತಿಪಾದನೆಯಾಗಿದೆ. ಜಾರ್ಖಂಡ್ ಸರಕಾರದ ತನ್ನ 6 ವರ್ಷಗಳ ಸೇವೆಯಲ್ಲಿ ಇಮ್ರಾನ್, ಲಾತೇಹಾರ್‌ನಲ್ಲಿ ಉಪವಿಭಾಗೀಯ ಅಧಿಕಾರಿಯಾಗಿ (ಎಸ್‌ಡಿಒ) ಹಾಗೂ ಸುಮಾರು ಒಂದು ವರ್ಷ ಕಾಲ ರಾಮಗಡದ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ.
ಇಮ್ರಾನ್ ಸ್ವಚ್ಛ ಚಾರಿತ್ರದವರಾಗಿದ್ದರೂ ಅವರನ್ನು ಉದ್ದೇಶ ಪೂರ್ವಕವಾಗಿ ಬದಿಗೆ ಸರಿಸಿ, ಬಿಜೆಪಿ ನಾಯಕರಿಗೆ ನಿಕಟವಾಗಿರುವ ಕಳಂಕಿತ ಅಧಿಕಾರಿಗಳಿಗೆ ಹುಲುಸಾದ ಹುದ್ದೆಗಳನ್ನು ನೀಡಲಾಗಿದೆಯೆಂಬದು ಇಮ್ರಾನ್ ಕುಟುಂಬದ ಆರೋಪವಾಗಿದೆ.
ಇದೆಲ್ಲವೂ ಅವರ ಹೆಂಡತಿ ಅನ್ನಿ ಆನಿಯಾ ಅಬೂ ಆರಿಬ್ ಎಂಬವರ ಒಂದು ಫೇಸ್‌ಬುಕ್ ಪೋಸ್ಟ್‌ನ ಬಳಿಕ ಆರಂಭವಾಗಿದೆ. ಭೂ ಹಗರಣ, ಮರ ಕಡಿತ ಹಾಗೂ ಕಾಲ್ತುಳಿತ ನಿಯಂತ್ರಸಲು ವಿಫಲರಾಗಿರುವ ಆರೋಪ ಹೊತ್ತಿರುವ ಅಧಿಕಾರಿಗಳು ಕಲೆಕ್ಟರ್ ಹುದ್ದೆಗಳಲ್ಲಿದ್ದಾರೆ. ತನ್ನ ಪತಿಯನ್ನು ಪ್ರಧಾನ ವಾಹಿನಿಯ ಕೆಲಸಗಳಿಂದ ಬದಿಗಿಡಲಾಗಿದೆಯೆಂದು ಅವರದರಲ್ಲಿ ಆರೋಪಿಸಿದ್ದರು.
ಆ ಪೋಸ್ಟನ್ನು ಆಕೆ ಹಿಂದೆಗೆಯುವ ಮೊದಲು ಅನೇಕ ಮಿತ್ರರು ಹಾಗೂ ಹಿತಾಕಾಂಕ್ಷಿಗಳು ಶೇರ್ ಮಾಡಿದ್ದರು.
ಗುರುವಾರ, ಇಮ್ರಾನ್‌ರ ಅಣ್ಣ, ಪತ್ರಕರ್ತ ಅಸದುರ್ರಹ್ಮಾನ್ ಹಾಗೂ ಅತ್ತಿಗೆ, ಧನ್‌ಬಾದ್ ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಬಿಲ್ಕೀಸ್ ಖಾನಂ ಎಂಬವರು ಮಾಧ್ಯಮಗಳೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿದ್ದರು.
ಈ ಸರಕಾರವು ಅಲ್ಪಸಂಖ್ಯಾತರಿಗಾಗಿಲ್ಲ. 24 ಜಿಲ್ಲೆಗಳಲ್ಲಿ ಕೇವಲ ಒಬ್ಬರು ಮುಸ್ಲಿಂ ಜಿಲ್ಲಾಧಿಕಾರಿಯಿದ್ದಾರೆ. ಅವರನ್ನೂ ಹಿಂದಿನ ಯುಪಿಎ ಸರಕಾರ ನೇಮಕ ಮಾಡಿತ್ತೆಂದು ಖಾನಂ ಆರೋಪಿಸಿದ್ದರು.
ನಿರ್ಗಮನ ಮುಖ್ಯ ಕಾರ್ಯದರ್ಶಿ ರಾಜೀವ್ ಗಾವುಬಾ, ಈ ವಿಷಯದ ಬಗ್ಗೆ ಮಾತನಾಡಲು ನಿರಾಕರಿಸಿದ್ದು, ತಾನು ತನ್ನ ಉತ್ತರಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದ್ದೇನೆ ಎಂದಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯ ಏಕೈಕ ಮುಸ್ಲಿಂ ಮುಖ, ಪಕ್ಷದ ವಕ್ತಾರ ಕಮಾಲ್ ಖಾನ್, ಯಾವನೇ ಅಧಿಕಾರಿಯ ಹುದ್ದೆಗೆ ಜಾತಿ ಹಾಗೂ ಮತಗಳು ಅರ್ಹತೆಗಳಲ್ಲ. ಒಳ್ಳೆಯ ಹುದ್ದೆ ಅಂದರೆ ಏನೆಂಬುದನ್ನು ಅಧಿಕಾರಿಯ ಕುಟುಂಬ ಸ್ಟಷ್ಟಪಡಿಸಲಿ. ಜಾರ್ಖಂಡ್‌ನಲ್ಲಿ ಅಬುಬಕರ್ ಸಿದ್ದೀಕಿ ಎಂಬ ಮುಸ್ಲಿಂ ಅಧಿಕಾರಿ ಪಶ್ಚಿಮ ಸಿಂಗಭೂಮ್‌ನಲ್ಲಿ ಅತ್ಯಂತ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆಂದು ಹೇಳಿದ್ದಾರೆ.





