ಬಾಲ ಕಾರ್ಮಿಕರ ಪುನರ್ವಸತಿ: ರಾಜ್ಯಗಳಿಗೆ ಎನ್ನೆಚ್ಚಾರ್ಸಿ ನೋಟಿಸ್
ಹೊಸದಿಲ್ಲಿ,ಎ.1: 2013,ಮಾರ್ಚ್-2014,ಜುಲೈ ಅವಧಿಯಲ್ಲಿ ರಾಜಸ್ಥಾನದ ವಿವಿಧೆಡೆಗಳಿಂದ ರಕ್ಷಿಸಲಾಗಿರುವ 740 ಬಾಲಕಾರ್ಮಿಕರನ್ನು ಪುನರ್ವಸತಿಗೊಳಿಸುವಲ್ಲಿ ಅಧಿಕಾರಿಗಳ ಉದಾಸೀನ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ನೆಚ್ಚಾರ್ಸಿ)ವು ರಾಜಸ್ಥಾನ, ಬಿಹಾರ, ಜಾರ್ಖಂಡ್, ಪ.ಬಂಗಾಲ, ಉತ್ತರ ಪ್ರದೇಶ ಮತ್ತು ದಿಲ್ಲಿ ರಾಜ್ಯಗಳಿಗೆ ನೋಟಿಸುಗಳನ್ನು ಹೊರಡಿಸಿದ್ದು, ಎಂಟು ವಾರಗಳಲ್ಲಿ ಕ್ರಮಾನುಷ್ಠಾನ ವರದಿಗಳನ್ನು ಸಲ್ಲಿಸುವಂತೆ ಅವುಗಳಿಗೆ ಸೂಚಿಸಿದೆ.
ಈ ಪೈಕಿ 610 ಬಾಲಕಾರ್ಮಿಕರು ಬಿಹಾರಕ್ಕೆ ಸೇರಿದವರಾಗಿದ್ದರೆ,ಉಳಿದವರು ಜಾರ್ಖಂಡ್,ಪ.ಬಂಗಾಲ,ಉತ್ತರ ಪ್ರದೇಶ,ದಿಲ್ಲಿ ಮತ್ತು ರಾಜಸ್ಥಾನಗಳಿಗೆ ಸೇರಿದವರಾಗಿದ್ದಾರೆ.
ಆದರೆ ಬಿಹಾರದ 456 ಮಕ್ಕಳಿಗೆ ಮಾತ್ರ ಬಿಡುಗಡೆ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಆದರೂ ರಾಜಸ್ಥಾನದ ಅಧಿಕಾರಿಗಳು ಅವರಿಗೆ ಪ್ರಮಾಣಪತ್ರಗಳ ಪ್ರತಿಗಳನ್ನು ನೀಡಿಲ್ಲ. 284 ಮಕ್ಕಳಿಗೆ ಪ್ರಮಾಣಪತ್ರಗಳನ್ನು ಇನ್ನಷ್ಟೇ ನೀಡಬೇಕಾಗಿದೆ. ಆಯಾ ರಾಜ್ಯಗಳ ಸಂಬಂಧಿತ ಜಿಲ್ಲಾಡಳಿತಗಳು ಈ ಜೀತಮುಕ್ತ ಬಾಲಕಾರ್ಮಿಕರ ಪುನರ್ವಸತಿ ಪ್ರಕ್ರಿಯೆಯನ್ನು ಆರಂಭಿಸಲು ಈ ಪ್ರಮಾಣಪತ್ರಗಳು ಅಗತ್ಯವಾಗಿವೆ ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.
ಮಕ್ಕಳ ಸಂಕಷ್ಟಗಳಿಗೆ ಯಾರೂ ಕಿವಿಗೊಡುತ್ತಿರುವುದು ಕಂಡು ಬರುತ್ತಿಲ್ಲ. ಇದು ಕೇವಲ ಕಾನೂನುಗಳನ್ನು ಉಲ್ಲಂಘಿಸಿ ಮಕ್ಕಳನ್ನು ದುಡಿಮೆಗೆ ಹಚ್ಚಿದ ಘಟನೆಯಲ್ಲ. ಮಕ್ಕಳನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕಳ್ಳ ಸಾಗಣೆ ಮಾಡಿರುವ ಹೇಯ ಕೃತ್ಯವಾಗಿದೆ ಎಂದು ಆಯೋಗ ಸದಸ್ಯ ನ್ಯಾ.ಡಿ.ಮುರುಗೇಶನ್ ಅಭಿಪ್ರಾಯಿಸಿದರು.





