‘ಭಾರತ್ ಮಾತಾ ಕಿ ಜೈ’ ಘೋಷಣೆಯ ವಿರುದ್ಧ ದಾರುಲ್ ಉಲೂಮ್ ಫತ್ವಾ
ಹೊಸದಿಲ್ಲಿ, ಎ. 1: ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುವುದು ಇಸ್ಲಾಮ್ ಧರ್ಮದ ನಂಬಿಕೆಗೆ ಹೊರತಾದುದು ಎಂದು ದಾರುಲ್ ಇಫ್ತಾ ದಾರುಲ್ ಉಲೂಮ್ ದೇವ್ ಬಂದ್ ಫತ್ವಾ ಹೊರಡಿಸಿದೆ. ‘ಭಾರತ ಮಾತಾಕಿ ಜೈ’ ಎಂಬ ಘೋಷಣೆ ಕೂಗುವಂತೆ ಮುಸ್ಲಿಮರನ್ನು ನಿರ್ಬಂಧಿಸಲಾಗುತ್ತಿದೆ. ‘ಭಾರತ ಮಾತಾ’ ಎನ್ನುವುದು ಹಿಂದೂಗಳ ನಂಬಿಕೆಯ ಪ್ರಕಾರ ದೇವಿಯ ಹೆಸರಾಗಿದೆ. ಅವರು ಅದನ್ನು ಪೂಜಿಸುತ್ತಾರೆ. ಅವರು ಭಾರತ ಮಾತಾ ದೇವಿಯನ್ನು ಭಾರತದ ಸರ್ವೋಚ್ಚ ಮಾಲಕಿ, ಒಡತಿ ಹಾಗೂ ಅಧಿಕಾರಸ್ಥೆ ಎಂದು ನಂಬುತ್ತಾರೆ. ಇದು ಖಂಡಿತಾ ಬಹುದೇವಾರಾಧನೆಯ ನಂಬಿಕೆಯಾಗಿದೆ. ದೇಶವನ್ನು ಪೂಜಿಸುವುದು ಈ ಘೋಷಣೆಯ ಭಾಗವಾಗಿದೆ. ಏಕದೇವತ್ವಕ್ಕೆ ವಿರುದ್ಧವಾದ ಘೋಷಣೆಯ ವಿಷಯದಲ್ಲಿ ಮುಸಲ್ಮಾನರು ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಭಾರತದ ಕಾನೂನು ನಿಯಮಗಳ ಪ್ರಕಾರ ಇಲ್ಲಿನ ಪ್ರತಿಯೊಬ್ಬ ನಾಗರಿಕನಿಗೆ ಧಾರ್ಮಿಕ ಸ್ವಾತಂತ್ರವಿದೆ. ಇದನ್ನು ಹತ್ತಿಕ್ಕುವ ಅಧಿಕಾರ ಯಾರಿಗೂ ಇಲ್ಲ ಎಂದು ಪ್ರಕಟಣೆ ತಿಳಿಸಿದೆ. ಕೆಲವು ವರ್ಷಗಳ ಹಿಂದೆ ವಂದೇಮಾತರಂ ಕುರಿತೂ ಇದೇ ವಿವಾದ ತಲೆದೋರಿತ್ತು. ಇದೀಗ ಭಾರತ ಮಾತಾಕಿ ಜೈ ಎಂಬ ಘೋಷಣೆಯನ್ನು ಮುಸಲ್ಮಾನರ ಪಾಲಿಗೆ ಕಡ್ಡಾಯಗೊಳಿಸಲಾಗುತ್ತಿದೆ. ಇವೆರಡೂ ಒಂದೇ ತರದ ಸಮಸ್ಯೆಗಳಾಗಿವೆ ಎಂದು ಫತ್ವಾ ಅಭಿಪ್ರಾಯಪಟ್ಟಿದೆ.
ನಿಸ್ಸಂದೇಹವಾಗಿ ಭಾರತ ನಮ್ಮ ದೇಶವಾಗಿದೆ. ನಾವು ಮತ್ತು ನಮ್ಮ ಪೂರ್ವಜರು ಇಲ್ಲೇ ಜನಿಸಿದೆವು. ಇದು ನಮ್ಮ ಮಾತೃಭೂಮಿ. ನಾವಿದನ್ನು ಪ್ರೀತಿಸುತ್ತೇವೆ. ಆದರೆ ನಾವು ನಮ್ಮ ದೇಶವನ್ನು ಆರಾಧ್ಯ ದೇವರೆಂದು ಪರಿಗಣಿಸುವುದಿಲ್ಲ. ಆಂದರೆ ನಾವು ಭಾರತವನ್ನು ಪೂಜಿಸುವುದಿಲ್ಲ. ಮುಸಲ್ಮಾನರು ದೇವರು ಒಬ್ಬನೇ ಎಂದು ನಂಬುತ್ತಾರೆ. ದೇವರಲ್ಲದ ಯಾರನ್ನೂ ಪೂಜಿಸಲು ಅವರಿಗೆ ಸಾಧ್ಯವಿಲ್ಲ. ಆದುದರಿಂದ ಈ ಗೀತೆಯಿಂದ ಮುಸ್ಲಿಮರನ್ನು ಹೊರತು ಪಡಿಸಬೇಕು ಎಂದು ಫತ್ವಾ ಕೇಳಿಕೊಂಡಿದೆ.





