ಕಾರ್ಕಳ ಸರಕಾರಿ ಆಸ್ಪತ್ರೆಯ ಶೀತಲೀಕರಣ ಘಟಕ: ಉದ್ಘಾಟನೆಗೆ ಮೊದಲೇ ಬಂಡವಾಳ ಬಯಲು!

ಮುಹಮ್ಮದ್ ಶರೀಫ್ ಕಾರ್ಕಳ
ಕಾರ್ಕಳ, ಎ.1: ಇಲ್ಲಿನ ಸರಕಾರಿ ಆಸ್ಪತ್ರೆಯ ಶೀತಲೀಕರಣ ಘಟಕ ಇನ್ನೇನು ಉದ್ಘಾಟನೆಗೊಂಡು ಸಾರ್ವಜನಿಕರ ಸೇವೆಗೆ ತೆರೆದುಕೊಳ್ಳುವಷ್ಟರಲ್ಲಿ ನಿಜ ಬಣ್ಣ ಬಯಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ನಿರ್ಮಿತಿ ಕೇಂದ್ರವು ಶೀತಲೀಕರಣ ಘಟಕದ ಕಾಮಗಾರಿಗಳನ್ನು ಮಾಡಿದೆ. ಆದರೆ, ಇದರಲ್ಲಿ ಕಳಪೆ ಕಾಮಗಾರಿ ನಡೆದಿದೆಯೇ? ಎನ್ನುವ ಸಂದೇಹ ಘಟಕದ ಕಟ್ಟಡವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹುಟ್ಟುತ್ತವೆ. ಕಟ್ಟಡದ ಕಿಟಕಿಗಳು ತುಕ್ಕು ಹಿಡಿದು ಇನ್ನೇನು ಮುರಿದು ಬೀಳಲಿರುವ ಪರಿಸ್ಥಿತಿಗೆ ತಲುಪಿದೆ. ಶೀತಲೀಕರಣದ ಯಂತ್ರಕ್ಕೂ ಅಲ್ಲಲ್ಲಿ ತುಕ್ಕು ಹಿಡಿದಿರುವುದು ಬೆಳಕಿಗೆ ಬಂದಿದೆ. ಎರಡು ಮೃತ ದೇಹಗಳನ್ನು ಇಡುವ ವ್ಯವಸ್ಥೆ ಇರುವ ಅಲೆಂಜರ್ಸ್ ಕಂಪೆನಿಯ ಈ ಶೀತಲೀಕರಣ ಯಂತ್ರ ಸೆಕೆಂಡ್ ಹ್ಯಾಂಡ್ ಯಂತ್ರದಂತೆ ಕಾಣುತ್ತಿದ್ದು, ಯಂತ್ರದ ಖರೀದಿಯಲ್ಲೇ ಗೋಲ್‌ಮಾಲ್ ನಡೆದಿದೆಯೇ ಎನ್ನುವ ಪ್ರಶ್ನೆ ಎದ್ದಿವೆ.ಉದ್ಘಾಟನೆಗೆ ಮೊದಲೇ ಕಳಪೆ ಕಾಮಗಾರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಈವರೆಗೂ ಶೀತಲೀಕರಣದ ಭಾಗ್ಯ ಒದಗಿ ಬಂದಿರಲಿಲ್ಲ. ಮೃತದೇಹಗಳನ್ನು ದೂರ ಪ್ರದೇಶದ ಸಂಬಂಧಿಕರು ಬರುವವರೆಗೂ ಕಾಯ್ದಿಡಬೇಕು ಎಂಬ ಮೃತ ಕುಟುಂಬದ ಬೇಡಿಕೆಗೆ ಉತ್ತರ ಸಿಕ್ಕಿರಲಿಲ್ಲ. ಇದರಿಂದ ಜಿಲ್ಲಾ ಕೇಂದ್ರ ಆಸ್ಪತ್ರೆಗಳಿಗೆ ದುಬಾರಿ ಬೆಲೆ ತೆತ್ತು ಮೃತದೇಹಗಳನ್ನು, ಅವರ ಒಡನಾಡಿಗಳು ಬರುವವರೆಗೂ ಅಲ್ಲಿಡುವ ಪ್ರಕ್ರಿಯೆಯಿಂದ ಸಾಮಾನ್ಯ ವರ್ಗದ ಜನರು ಸುಸ್ತಾಗುತ್ತಿದ್ದರು. ಈ ಮಧ್ಯೆ ಕಾರ್ಕಳ ಸರಕಾರಿ ಆಸ್ಪತ್ರೆಯು ಸಾಮಾನ್ಯರ ಬೇಡಿಕೆಗೆ ಸ್ಪಂದಿಸಿದ್ದು, ಸಂಸದೆ ಶೋಭಾ ಕರಂದ್ಲಾಜೆಯವರ ಅನುದಾನದಡಿ ಶೀತಲೀಕರಣ ಘಟಕವನ್ನು ತೆರೆದಿದೆ. ಸದ್ಯದಲ್ಲಿಯೇ ಈ ಘಟಕ ಉದ್ಘಾಟನೆಗೊಳ್ಳಲಿದ್ದು, ಅನಿವಾರ್ಯ ಸಂದರ್ಭದಲ್ಲಿ ಮೃತದೇಹವನ್ನು ಒಂದೆ ರಡು ದಿನ ಸಂರಕ್ಷಿಸಿಡ ಬಹುದಾಗಿದೆ. ಆಕಸ್ಮಿಕ ಅವಘಡಗಳಲ್ಲಿ ಮೃತಪಟ್ಟವರ ದೇಹಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗುತ್ತದೆ. ಬಳಿಕ ಸಂಬಂಧಪಟ್ಟವರ ವಶಕ್ಕೊಪ್ಪಿಸಲಾಗುತ್ತಿದೆ. ಅಂತಹವರ ಪಾಲಿಗೆ ಶೀತಲೀಕರಣ ಘಟಕ ಪ್ರಯೋಜನಕಾರಿಯಾಗಲಿದೆ. ಬಿಪಿಎಲ್ ಕಾರ್ಡುದಾರರಿಗೆ ಈ ಶೀಲೀಕರಣ ಘಟಕದ ಸೇವೆ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಇತರ ವರ್ಗದವರಿಗೆ ದೊರಕಿಸಿಕೊಡುವಲ್ಲಿ ಸರಕಾರಿ ಆಸ್ಪತ್ರೆ ಚಿಂತನೆ ನಡೆಸುತ್ತಿದೆ. ಇದು ಜನಸಾಮಾನ್ಯರಿಗೂ ಖುಷಿಕೊಡುವ ವಿಚಾರವಾದರೂ ಕಳಪೆ ಕಾಮಗಾರಿಯ ಸಂಗತಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿವೆ.
ಜನಸಾಮಾನ್ಯರಿಗೆ ಪ್ರಯೋಜನವಾಗಬೇಕು ಎನ್ನುವ ದೃಷ್ಟಿಯಿಂದ ಸರಕಾರಿ ಆಸ್ಪತ್ರೆ ಶೀತಲೀಕರಣ ಘಟಕಕ್ಕೆ ಚಾಲನೆ ನೀಡಲಿದೆ. ಈ ಹಿಂದೆ ಮರಣೋತ್ತರ ಪರೀಕ್ಷೆಯ ನಂತರ ಮೃತರ ಕುಟುಂಬಗಳಿಗೆ ದೂರದೂರು ಗಳಲ್ಲಿರುವ ಮೃ
ತರ ವಾರಸುದಾರರು ಬರುವ ತನಕ ಮೃತ ದೇಹಗಳನ್ನು ಸಂರಕ್ಷಿಸಿ ಇಡುವ ವ್ಯವಸ್ಥೆಯಿರಲಿಲ್ಲ. ಆದರೆ ಶೈತ್ಯಗಾರ ಘಟಕದ ಯಂತ್ರೋಪಕರಣದ ಗುಣಮಟ್ಟದ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲ. ಡಾ. ಹೆಬ್ಬಾರ್, ಮುಖ್ಯ ವೈದ್ಯಾಧಿಕಾರಿಗಳು
ನಗರ ಸರಕಾರಿ ಆಸ್ಪತ್ರೆ, ಕಾರ್ಕಳ







