ಕಿವೀಸ್ ಆಲ್‌ರೌಂಡರ್ ಎಲಿಯಟ್ ಏಕದಿನಕ್ಕೆ ಗುಡ್‌ಬೈ

ಹ್ಯಾಮಿಲ್ಟನ್, ಎ.1: ನ್ಯೂಝಿಲೆಂಡ್‌ನ ಆಲ್‌ರೌಂಡರ್ ಗ್ರಾಂಟ್ ಎಲಿಯಟ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.
ಕಿವೀಸ್ ಟ್ವೆಂಟಿ-20 ವಿಶ್ವಕಪ್‌ನ ಸೆಮಿ ಫೈನಲ್ ಹಂತದಲ್ಲಿ ಮುಗ್ಗರಿಸಿದ ಎರಡು ದಿನಗಳ ನಂತರ ಎಲಿಯಟ್ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ಎಲಿಯಟ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ. 14 ತಿಂಗಳ ಬಿಡುವಿನ ನಂತರ 2015ರ ಏಕದಿನ ವಿಶ್ವಕಪ್‌ನಲ್ಲಿ ಕಿವೀಸ್ ತಂಡಕ್ಕೆ ವಾಪಸಾಗಿದ್ದ ಎಲಿಯಟ್ ಮೆಗಾ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.
2015ರ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ 73 ಎಸೆತಗಳಲ್ಲಿ ಔಟಾಗದೆ 84 ರನ್ ಗಳಿಸಿದ್ದ ಎಲಿಯಟ್ ಕಿವೀಸ್ ತಂಡ ವಿಶ್ವಕಪ್‌ನಲ್ಲಿ ಮೊದಲ ಬಾರಿ ಫೈನಲ್‌ಗೆ ತಲುಪಲು ನೆರವಾಗಿದ್ದರು. ಆಫ್ರಿಕ ವಿರುದ್ಧ ಪಂದ್ಯದಲ್ಲಿ ಕಿವೀಸ್ ಗೆಲುವಿಗೆ 2 ಎಸೆತಗಳಲ್ಲಿ 5 ರನ್ ಅಗತ್ಯವಿದ್ದಾಗ ಡೇಲ್ ಸ್ಟೇಯ್ನಾ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದ ಎಲಿಯಟ್ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು.
2015ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಎಲಿಯಟ್ 83 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದರು. ಆದರೆ, ಆ ಪಂದ್ಯವನ್ನು ಕಿವೀಸ್ 7 ವಿಕೆಟ್‌ಗಳಿಂದ ಸೋತಿತ್ತು.
ದಕ್ಷಿಣ ಆಫ್ರಿಕದ ಸಂಜಾತ ಎಲಿಯಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಉದ್ಧೇಶದಿಂದ ನ್ಯೂಝಿಲೆಂಡ್‌ಗೆ ವಲಸೆ ಬಂದಿದ್ದರು. 2008ರಲ್ಲಿ ಇಂಗ್ಲೆಂಡ್ ವಿರುದ್ದ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಎಲಿಯಟ್ 2009ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಝಿಲೆಂಡ್ ತಂಡ ಫೈನಲ್‌ಗೆ ತಲುಪಲು ಕಾರಣರಾಗಿದ್ದರು.
ಏಕದಿನದಲ್ಲಿ ಒಟ್ಟು 83 ಪಂದ್ಯಗಳನ್ನು ಆಡಿರುವ ಎಲಿಯಟ್ 1,976 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 11 ಅರ್ಧಶತಕಗಳಿವೆ. ಫೆಬ್ರವರಿಯಲ್ಲಿ ಆಸ್ಟ್ರೇಲಿಯ ವಿರುದ್ದ ಕೊನೆಯ ಪಂದ್ಯ ಆಡಿದ್ದು, ಆ ಪಂದ್ಯದಲ್ಲಿ 11ನೆ ಅರ್ಧಶತಕ ಬಾರಿಸಿದ್ದರು. ಉತ್ತಮ ಬೌಲರ್ ಆಗಿದ್ದ ಎಲಿಯಟ್ ಏಕದಿನದಲ್ಲಿ 39 ವಿಕೆಟ್ ಉಡಾಯಿಸಿದ್ದರು.
2016ರ ಟ್ವೆಂಟಿ-20 ವಿಶ್ವಕಪ್‌ನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವೆ ಎಂದು 2015ರ ಸೆಪ್ಟಂಬರ್‌ನಲ್ಲಿ ಎಲಿಯಟ್ ಹೇಳಿದ್ದರು.







