ರವಿ ಶಾಸ್ತ್ರಿ ಜೊತೆ ಒಪ್ಪಂದ ಮುಕ್ತಾಯ, ಶೀಘ್ರವೇ ಹೊಸ ಕೋಚ್: ಬಿಸಿಸಿಐ

ಹೊಸದಿಲ್ಲಿ, ಎ.1: ‘‘ತಂಡದ ನಿರ್ದೇಶಕ ರವಿ ಶಾಸ್ತ್ರಿ ಜೊತೆ ಮಾಡಿಕೊಂಡಿರುವ ಒಪ್ಪಂದದ ಅವಧಿ ಕೊನೆಗೊಂಡಿದ್ದು, ಅವರನ್ನು ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆ ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗುಲಿ ಅವರನ್ನೊಳಗೊಂಡ ಉನ್ನತ ಮಟ್ಟದ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಅಂತಿಮ ನಿರ್ಧಾರ ಕೈಗೊಳ್ಳಲಿದೆ’’ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
‘‘ರವಿ ಶಾಸ್ತ್ರಿ ಅವರೊಂದಿಗಿನ ಒಪ್ಪಂದ ಕೊನೆಗೊಂಡಿದೆ. ನಾವು ಪೂರ್ಣಾವಧಿಯ ಕೋಚ್‌ರನ್ನು ಎದುರು ನೋಡುತ್ತಿದ್ದೇವೆ. ಈ ಕುರಿತು ಕ್ರಿಕೆಟ್ ಸಲಹಾ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಇನ್ನು ಮುಂದೆ ಟೀಮ್ ಡೈರೆಕ್ಟರ್ ಹುದ್ದೆ ಇರುವುದಿಲ್ಲ. ಕೇವಲ ಪ್ರಮುಖ ಕೋಚ್ ಮಾತ್ರ ಇರಲಿದ್ದಾರೆ. ಶಾಸ್ತ್ರಿ ಅವರ ಒಪ್ಪಂದವನ್ನು ನವೀಕರಿಸುವ ಬಗ್ಗೆ ಸಿಎಸಿ ತೀರ್ಮಾನಿಸಲಿದೆ ಎಂದು ಠಾಕೂರ್ ತಿಳಿಸಿದ್ದಾರೆ.
ಎ.3ರ ವಿಶ್ವಕಪ್ ಫೈನಲ್ ಪಂದ್ಯ ಕೊನೆಗೊಂಡ ನಂತರ ಐಪಿಎಲ್ ಆರಂಭಕ್ಕೆ ಮೊದಲು ಸಿಎಸಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬರಲಿದೆ ಎಂದು ಠಾಕೂರ್ ತಿಳಿಸಿದರು.





