ಕರ್ಣಾಟಕ ಬ್ಯಾಂಕ್ 58,500 ಕೋಟಿ ರೂ. ಠೇವಣಿ ಸಂಗ್ರಹ: ಶೇ.18.6 ಆರ್ಥಿಕ ಪ್ರಗತಿ ಸಾಧಿಸುವ ಗುರಿ
ಜಯರಾಮ ಭಟ್

ಮಂಗಳೂರು, ಎ.1: ಖಾಸಗಿ ರಂಗದಲ್ಲಿ ಮುಂಚೂಣಿಯಲ್ಲಿರುವ ಕರ್ಣಾಟಕ ಬ್ಯಾಂಕ್ 2016-17ನೆ ಆರ್ಥಿಕ ವರ್ಷದಲ್ಲಿ 1 ಲಕ್ಷ ಕೋ. ರೂ. ಆರ್ಥಿಕ ವ್ಯವಹಾರ, 58,500 ಕೋ.ರೂ. ಠೇವಣಿ ಸಂಗ್ರಹ ಮತ್ತು 41,500 ಕೋ.ರೂ. ಸಾಲ ನೀಡಿಕೆಯ ಗುರಿಯನ್ನು ಮತ್ತು ಒಟ್ಟು ಶೇ. 18.6 ಆರ್ಥಿಕ ಪ್ರಗತಿ ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಜಯರಾಮ್ ಭಟ್ ತಿಳಿಸಿದ್ದಾರೆ.
ಬ್ಯಾಂಕಿನ ಹಾಲಿ ಆರ್ಥಿಕ ವರ್ಷದ ಪ್ರಗತಿಯ ಬಗ್ಗೆ ಶುಕ್ರವಾರ ಕಚೇರಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪ್ರಸ್ತುತ ಬ್ಯಾಂಕ್ 2,000 ಸೇವಾ ಕೇಂದ್ರಗಳನ್ನು, 725 ಶಾಖೆಗಳನ್ನು, ದೇಶಾದ್ಯಂತ 1,275 ಎಟಿಎಂಗಳನ್ನು ಹೊಂದಿವೆ. 2015-16ರಲ್ಲಿ ಬ್ಯಾಂಕ್ 50 ಹೊಸ ಶಾಖೆಗಳನ್ನು, 275 ಎಟಿಎಂಗಳನ್ನು ತೆರೆದಿದೆ. 25 ಇ-ಲಾಬಿ, 25 ಮಿನಿ ಇ-ಲಾಬಿಗಳನ್ನು ತೆರೆದಿದೆ. ಉಡುಪಿ ಮತ್ತು ತುಮಕೂರಿನಲ್ಲಿ ಎರಡು ಪ್ರಾದೇಶಿಕ ಕಚೇರಿಗಳನ್ನೂ ಪ್ರಸಕ್ತ ವರ್ಷ ಆರಂಭಿಸಲಾಗಿದೆ ಎಂದವರು ವಿವರಿಸಿದರು.
ಪ್ರಸಕ್ತ ವರ್ಷ 40 ಹೊಸ ಬ್ಯಾಂಕ್ ಶಾಖೆಗಳನ್ನು, 225 ಹೊಸ ಎಟಿಎಂಗಳನ್ನು ಮತ್ತು 100 ಇ-ಲಾಬಿಗಳನ್ನು ಹಾಗೂ ಮಿನಿ ಇ-ಲಾಬಿಗಳನ್ನು ಆರಂಭಿಸುವ ಗುರಿಯನ್ನು ಬ್ಯಾಂಕ್ ಹೊಂದಿದೆ. ಹೊಸ ತಂತ್ರಜ್ಞಾನವನ್ನು ಕೋ ಬ್ರಾಡೆಂಡ್ ಕ್ರೆಡಿಟ್ ಕಾರ್ಡ್, ಸ್ಟೂಡೆಂಟ್ ಕೊಂಬೊ ಕಾರ್ಡ್, ಮೊಬೈಲ್ ವರ್ಚುವಲ್ ಕಾರ್ಡ್, ಮೊಬೈಲ್ ವಾಲೆಟ್, ಐಎಂಪಿಎಸ್‌ಹಾಗೂ ಇನ್ನಿತರ ತಾಂತ್ರಿಕ ಸೌಲಭ್ಯಗಳನ್ನು ಡಿಜಿಟಲ್ ತಂತ್ರಜ್ಞಾನದ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುವ ಗುರಿ ಹೊಂದಿದೆ ಎಂದು ಜಯರಾಮ್ ಭಟ್ ತಿಳಿಸಿದರು.
ಸಭೆಯಲ್ಲಿ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಮಹಾಬಲೇಶ್ವರ ಎಂ.ಎಸ್, ಮಹಾ ಪ್ರಬಂಧಕರಾದ ಎನ್.ಉಪೇಂದ್ರ ಪ್ರಭು, ಡಾ.ಮೀರಾ ಅರಾನ್ಹ, ರಘುರಾಮ್, ರಾಘವೇಂದ್ರ ಭಟ್ ಎಂ., ಚಂದ್ರಶೇಖರ್ ರಾವ್ ಬಿ., ಸುಭಾಶ್ಚಂದ್ರ ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು.







