ತಂಬಾಕು ಉತ್ಪನ್ನಗಳ ಪೊಟ್ಟಣದಲ್ಲಿ ಶೇ.85ರಷ್ಟು ಸಚಿತ್ರ ಎಚ್ಚರಿಕೆ ಜಾರಿ

ಹೊಸದಿಲ್ಲಿ, ಎ.1: ಕೇಂದ್ರ ಸರಕಾರದ ಅಧಿಸೂಚನೆಯನ್ವಯ ತಂಬಾಕು ಉತ್ಪನ್ನಗಳ ಪೊಟ್ಟಣಗಳ ಶೇ.85ರಷ್ಟು ಸ್ಥಳದಲ್ಲಿ ದೊಡ್ಡದಾಗಿ ಸಚಿತ್ರ ಎಚ್ಚರಿಕೆಯ ಮುದ್ರಣ ಶುಕ್ರವಾರದಿಂದ ಜಾರಿಯಾಗಿದೆ. ಸಚಿತ್ರ ಸಂದೇಶದ ಗಾತ್ರವನ್ನು ತೀವ್ರವಾಗಿ ಕಡಿತಗೊಳಿಸಬೇಕೆಂಬ ಸಂಸದೀಯ ಸಮಿತಿಯೊಂದರ ಶಿಫಾರಸನ್ನು ಸರಕಾರ ಮಾನ್ಯ ಮಾಡಿಲ್ಲ.
ಸಿಗರೇಟು ಮತ್ತು ಇತರ ತಂಬಾಕು ಉತ್ನನ್ನಗಳ (ಪ್ಯಾಕೇಜಿಂಗ್ ಹಾಗೂ ಲೇಬಲಿಂಗ್) ತಿದ್ದುಪಡಿ ನಿಯಮಗಳು -2014ರ ಜಾರಿಗಾಗಿ ಕೇಂದ್ರ ಆರೋಗ್ಯ ಸಚಿವಾಲಯವು 2015ರ ಸೆ.24ರಂದು ಹೊರಡಿಸಿದ್ದ ಅಧಿಸೂಚನೆ ಎ.1ರಿಂದ ಜಾರಿಯಾಗಿದೆ. ಈ ನಿಯಮಗಳನ್ವಯ ತಂಬಾಕು ಉತ್ಪನ್ನಗಳ ಪೊಟ್ಟಣಗಳ ಮೇಲೆ ದೊಡ್ಡದಾಗಿ ಸಚಿತ್ರ ಎಚ್ಚರಿಕೆಯನ್ನು ಮುದ್ರಿಸಬೇಕಿದೆ.
ಹೇಳಲ್ಪಟ್ಟ ನಿಯಮಗಳನ್ನು 2016ರ ಎ.1ರಿಂದ ಜಾರಿಗೆ ತರುವ ವಾಗ್ದಾನವನ್ನು ಸರಕಾರವು ಮಾ.28ರಂದು ರಾಜಸ್ಥಾನ ಹೈಕೋರ್ಟ್‌ಗೆ ನೀಡಿತ್ತು. ಸರಕಾರದ ಪ್ರಸ್ತಾಪವನ್ನು ಉಪ ಕಾಯ್ದೆಗಳ ಸಂಸದೀಯ ಸಮಿತಿ ‘ತೀರಾ ಕ್ರೂರ’ ಎಂದು ಬಣ್ಣಿಸಿತ್ತು. ಅದು ಶೇ.50 ಸ್ಥಳದಲ್ಲಿ ಸಂದೇಶ ಮುದ್ರಿಸಲು ಶಿಫಾರಸು ಮಾಡಿತ್ತು.
ಸಮಿತಿಯ ಈ ನಿಲುವು ಸಂಸದರು ಹಾಗೂ ಆರೋಗ್ಯ ತಜ್ಞರ ತೀಕ್ಷ್ಣ ಟೀಕೆಗೆ ಗುರಿಯಾಗಿತ್ತು.





