ಅಡಿಕೆ ರಫ್ತಿನ ಯೋಜನೆ: ಕ್ಯಾಂಪ್ಕೋಗೆ ಚೀನಾ ನಿಯೋಗ ಭೇಟಿ

ಮಂಗಳೂರು, ಎ.1: ಚೀನಾಕ್ಕೆ ಅಡಿಕೆ ರಫ್ತು ಮಾಡುವ ವಿಚಾರದಲ್ಲಿ ಕ್ಯಾಂಪ್ಕೋ ತನ್ನ ಪ್ರಯತ್ನಗಳನ್ನು ಮುಂದುವರಿಸಿದ್ದು, ಇದರ ಫಲಪ್ರದವಾಗಿ ಚೀನಾದ ಪ್ರಸಿದ್ಧ ಅಡಿಕೆ ಉದ್ಯಮ ಸಂಸ್ಥೆ ಕೋವಿವಾಂಗ್‌ನ ಅಧ್ಯಕ್ಷ ಗೊ ಜಿಗ್‌ವಾಂಗ್, ಇಂದು ಕ್ಯಾಂಪ್ಕೋ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ನಿಯೋಗದಲ್ಲಿ ಆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲೂ ಲಿಹುವ ಮತ್ತು ಮಾರುಕಟ್ಟೆ ವ್ಯವಸ್ಥಾಪಕ ಲಿ ಆಗಮಿಸಿದ್ದು ಮಾತುಕತೆಯಲ್ಲಿ ಸಹಕರಿಸಿದರು.
ಮಾರುಕಟ್ಟೆಯ ಸ್ಥಿರತೆಗಾಗಿ ಕ್ಯಾಂಪ್ಕ್ಕೋ ಕೈಗೊಂಡಿರುವ ಮಹತ್ತರ ಕಾರ್ಯಯೋಜನೆಗಳಲ್ಲಿ ಚೀನಾಕ್ಕೆ ಎಳೆಸು ಅಡಿಕೆಯನ್ನು ರಪ್ತು ಮಾಡುವುದೂ ಒಂದಾಗಿದ್ದು, ಈ ಬಗ್ಗೆ ಈಗಾಗಲೇ ಎರಡು ಸುತ್ತಿನ ಮಾತುಕತೆಗಳು ಯಶಸ್ವಿಯಾಗಿ ನಡೆದುದರ ಫಲವಾಗಿ ಈ ಮೂರನೆ ಸುತ್ತಿನ ಮಾತುಕತೆ ಸಾಧ್ಯವಾಗಿದೆ. ವಿಶ್ವದ ಪ್ರಧಾನ ಅಡಿಕೆ ಬೆಳೆಯುವ ರಾಷ್ಟ್ರಗಳಲ್ಲಿ ಒಂದಾಗಿರುವ ಚೀನಾ, ಭಾರತದ ಸಹಯೋಗದೊಂದಿಗೆ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ. ಈ ಉತ್ಪನ್ನಗಳ ತಯಾರಿಕೆಗೆ ಬೇಕಾದ ಮೂಲವಸ್ತುವನ್ನು ಒದಗಿಸುವಲ್ಲಿ ಕ್ಯಾಂಪ್ಕೋ ಉತ್ಸುಕವಾಗಿದ್ದು, ಕಾರ್ಯಯೋಜನೆಗಳು ಯಶಸ್ವಿಯಾದಲ್ಲಿ ಪೂರಕ ವಾತಾವರಣ ನಿರ್ಮಾಣಗೊಂಡು ಭಾರತದಲ್ಲಿ ಅಡಿಕೆ ಮಾರುಕಟ್ಟೆಯ ಸ್ಥಿರತೆಗೆ ಅದು ನೆರವಾಗಲಿದೆ.
ಮಾತುಕತೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ನಿರ್ದೇಶಕ ಕೊಂಕೋಡಿ ಪದ್ಮನಾಭ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.





