ವಾರ್ಷಿಕ ರೂ.50 ಲಕ್ಷಕ್ಕಿಂತ ಹೆಚ್ಚು ಆದಾಯವಿದ್ದರೆ ಘೋಷಣೆ ಕಡ್ಡಾಯ

ಹೊಸದಿಲ್ಲಿ, ಎ.1: ಆದಾಯ ತೆರಿಗೆ ಇಲಾಖೆಯ 2016-17ನೆ ವೌಲ್ಯಮಾಪನ ವರ್ಷಕ್ಕಾಗಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫಾರ್ಮ್‌ಗಳ ಹೊಸ ಸೆಟ್ ಒಂದನ್ನು ಅಧಿಸೂಚಿಸಿದೆ. ವಾರ್ಷಿಕ 50 ಲಕ್ಷ ರೂ.ಗಳಿಗಿಂತ ಹೆಚ್ಚು ಆದಾಯ ಇರುವವರು ಹಾಗೂ ಯಾಚ್, ವಿಮಾನ ಅಥವಾ ಬೆಲೆ ಬಾಳುವ ಆಭರಣಗಳ ಮಾಲಕರು ಇನ್ನು ಈ ದುಬಾರಿ ಆಸ್ತಿಗಳನ್ನು ಘೋಷಿಸಲೇ ಬೇಕಾಗುತ್ತದೆ.
ಶುಕ್ರವಾರ, ಹೊಸ ವಿತ್ತ ವರ್ಷದ ಆರಂಭದೊಂದಿಗೆ, ಹೊಸ ಫಾರ್ಮ್‌ಗಳ ದಾಖಲಿಸುವಿಕೆ ಆರಂಭವಾಗುತ್ತದೆ. ವಿತ್ತ ಸಚಿವಾಲಯವು ಈ ಸಂಬಂಧ ಗಜೆಟ್ ಆದೇಶವೊಂದನ್ನು ಮಾ.30ರಂದು ಪ್ರಕಟಿಸಿದೆ.
ತೆರಿಗೆದಾರರು ತಮ್ಮ ಐಟಿಆರ್‌ಗಳನ್ನು ಜು.31ರಂದು ನಿಗದಿತ ಗಡುವಿನೊಳಗೆ ಸಲ್ಲಿಸಬಹುದು.
ಇಲಾಖೆಯು ಹೊಸ ಐಟಿಆರ್‌ಗಳಲ್ಲಿ (ಐಟಿಆರ್-2 ಹಾಗೂ 2ಎ), ವರ್ಷಾಂತ್ಯದಲ್ಲಿ ಆಸ್ತಿ ಮತ್ತು ಜವಾಬ್ದಾರಿಗಳು ಎಂಬ ಹೊಸದಾದ ಅಂಕಣವನ್ನು ಪರಿಚಯಿಸಿದೆ. ಅದು ಒಟ್ಟು ವಾರ್ಷಿಕ ವರಮಾನ ರೂ.50 ಲಕ್ಷಕ್ಕಿಂತ ಹೆಚ್ಚಾಗಿದ್ದಲ್ಲಿ ಅನ್ವಯವಾಗುತ್ತದೆ. ಈ ಆದಾಯ ವ್ಯಾಪ್ತಿಗೆ ಬರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಅಂತಹ ಆಸ್ತಿಗಳ ಒಟ್ಟು ವೌಲ್ಯವನ್ನೂ ನಮೂದಿಸ ಬೇಕಾಗುತ್ತದೆ.
ಆದುದರಿಂದ, ಭೂಮಿ ಕಟ್ಟಡಗಳಂತಹ ಸ್ಥಿರ ಆಸ್ತಿಗಳನ್ನು ಹೊಸ ಐಟಿಆರ್ ನಿಯಮದನ್ವಯ ದಾಖಲಿಸಬೇಕಾಗಿದ್ದು, ಕೈಯಲ್ಲಿರುವ ನಗದು, ಆಭರಣಗಳು, ಚಿನ್ನ, ವಾಹನಗಳು, ಯಾಚ್‌ಗಳು, ದೋಣಿಗಳು ಹಾಗೂ ವಿಮಾನಗಳಂತಹ ಚರ ಆಸ್ತಿಯನ್ನೂ ಆದಾಯ ತೆರಿಗೆ ಇಲಾಖೆಗೆ ಬಹಿರಂಗ ಪಡಿಸಬೇಕು.
ಈ ದುಬಾರಿ ಆಸ್ತಿಗಳನ್ನು ವರದಿ ಮಾಡುವ ಸಂಸ್ಥೆಗಳು, ಈ ವಸ್ತುಗಳೊಂದಿಗೆ ಅವುಗಳಿಗಿರುವ ‘ಬಾಧ್ಯತಾ ಸಂಬಂಧಗಳನ್ನು’ ವಿವರಿಸ ಬೇಕಾಗುವುದು. ಸರಕಾರದ ಮಹತ್ತ್ವಾಕಾಂಕ್ಷಿ ಸ್ಟಾರ್ಟ್ ಅಪ್ ವ್ಯವಹಾರ ಉತ್ತೇಜನ ಯೋಜನೆಯ ಸ್ಫೂರ್ತಿಯಲ್ಲಿ, ಐಟಿಆರ್‌ಗಳು ಮೊದಲ ಬಾರಿಗೆ ವಲಯದ ಆದಾಯವನ್ನು ದಾಖಲಿಸಲು ಪ್ರತ್ಯೇಕ ಅಂಕವನ್ನಿರಿಸಿದೆ.
ವ್ಯಾಪಾರಿ, ವೃತ್ತಿ ಅಥವಾ ಬಂಡವಾಳ ಲಾಭಗಳಿಂದ ಆದಾಯ ಇಲ್ಲದ ಹಾಗೂ ವಿದೇಶಗಳಲ್ಲಿ ಆಸ್ತಿ ಹೊಂದಿರದ ವ್ಯಕ್ತಿಗಳು ಅಥವಾ ಎಚ್‌ಯುಎಫ್‌ಗಳು ತುಂಬಿಸಬೇಕಾದ ಐಟಿಆರ್-2ಎಯಲ್ಲಿ ‘ಪಾಸ್ ಥ್ರೂ ಇನ್‌ಕಂ’ ಎಂಬ ಹೊಸ ಅಂಕಣವಿರುತ್ತದೆ. ಅದು, ಅಭಿವೃದ್ಧಿ ಹೊಂದುತ್ತಿರುವ ಕಂಪೆನಿಗಳು ಹಾಗೂ ಸ್ಟಾರ್ಟಪ್ ಸಂಸ್ಥೆಗಳಿಗೆ ಸಂಬಂಧಿಸಿದುದಾಗಿದ್ದು, ಆದಾಯ ತೆರಿಗೆ ಕಾಯ್ದೆಯ 115ಯುಎ ಹಾಗೂ 115 ಯುಬಿ ಸೆಕ್ಷನ್‌ಗಳನ್ವಯ ವ್ಯಾಪಾರ ಟ್ರಸ್ಟ್ ಅಥವಾ ಹೂಡಿಕೆ ನಿಧಿಯ ವಿವಿರಗಳನ್ನು ಕೇಳುತ್ತದೆ.
ವೇತನ, ಒಂದು ಮನೆಯ ಆಸ್ತಿ ಅಥವಾ ಇತರ ಮೂಲಗಳಿಂದ ಆದಾಯ ಪಡೆಯುವವರಿಗಾಗಿರುವ ಅತ್ಯಂತ ಸರಳ ಐಟಿಆರ್-1ರಲ್ಲೀಗ ಮಾಲದಲ್ಲಿ ತೆರಿಗೆ ಕಡಿತವನ್ನು ನಮೂದಿಸುವ ಹೆಚ್ಚುವರಿ ಅಂಕಣವಿರುತ್ತದೆ. ಹಿಂದಿನ ಫಾರ್ಮ್‌ನಲ್ಲಿ 5 ಪುಟಗಳಿದ್ದರೆ ಹೊಸದರಲ್ಲಿ 7 ಪುಟಗಳಿರುತ್ತವೆ.







