ಭಾರತದಲ್ಲಿ ಸಿಗರೇಟ್ ಉತ್ಪಾದನೆ ಸ್ಥಗಿತ !

ಹೊಸದಿಲ್ಲಿ, ಎ.2: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಹೊಸ ನೀತಿ ಗೊಂದಲಮಯವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ತಂಬಾಕು ಉತ್ಪನ್ನ ಕಂಪನಿಗಳು ಶುಕ್ರವಾರದಿಂದ ಉತ್ಫಾದನೆ ಸ್ಥಗಿತಗೊಳಿಸಲು ನಿರ್ಧರಿಸಿವೆ.
ಹೊಸದಾಗಿ ಜಾರಿಗೊಳಿಸಲಾಗಿರುವ ಸಚಿತ್ರ ಎಚ್ಚರಿಕೆ ನಿಯಮಾವಳಿ ಗೊಂದಲಮಯವಾಗಿದೆ ಎನ್ನುವುದು ಉತ್ಪಾದಕರ ದೂರು. ದೇಶದ ಶೇಕಡ 98ರಷ್ಟು ಸಿಗರೇಟ್ ಉತ್ಪಾದನಾ ಕಂಪನಿಗಳು ಸದಸ್ಯರಾಗಿರುವ ಭಾರತದ ತಂಬಾಕು ಸಂಸ್ಥೆಯ ಹೇಳಿಕೆ ಪ್ರಕಾರ, "ಉತ್ಪಾದನೆ ಮುಂದುವರಿಸಿದರೆ, ಕಾನೂನನ್ನು ಉಂಘಿಸುವ ಸಾಧ್ಯತೆ ಇದೆ. ಆದ್ದರಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ" ಈ ಕ್ರಮದಿಂದ ದಿನಕ್ಕೆ 350 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಷ್ಟವಾಗಲಿದೆ ಎಂದು ಟಿಐಐ ಪ್ರಕಟಣೆ ಹೇಳಿದೆ.
ತಂಬಾಕು ಉತ್ಪನ್ನಗಳ ಪೊಟ್ಟಣದ ಒಟ್ಟು ಗಾತ್ರದ ಶೇಕಡ 85ರಷ್ಟು ಭಾಗದಲ್ಲಿ ಸಚಿತ್ರ ಎಚ್ಚರಿಕೆ ಇರಬೇಕು ಎಂಬ ನಿಯಮಾವಳಿಯನ್ನು ಆರೋಗ್ಯ ಸಚಿವಾಲಯ ಜಾರಿಗೊಳಿಸಿದೆ.
ಈ ಹಿಂದೆ ಶೇಕಡ 40ರ ಗಾತ್ರದ ಎಚ್ಚರಿಕೆ ಇರುತ್ತಿತ್ತು. ಈ ಬಗ್ಗೆ ಮಾರ್ಚ್ 15ರಂದು ಸಚಿವಾಲಯದಿಂದ ಸ್ಪಷ್ಟನೆ ಕೇಳಲಾಗಿತ್ತು ಎಂದು ಟಿಐಐ ಮೂಲಗಳು ಹೇಳಿವೆ. ಇದು ತೀರಾ ಕಠಿಣ ನಿಯಮಾವಳಿ ಎಂದು ಸಂಸದೀಯ ಸಮಿತಿ ಕೂಡಾ ಅಭಿಪ್ರಾಯಪಟ್ಟಿದೆ.







