ಸೌದಿ ಅರೇಬಿಯಾ: ಈ ವರ್ಷ ಮರಣ ದಂಡನೆ ಶಿಕ್ಷೆ ದುಪ್ಪಟ್ಟು

ರಿಯಾದ್, ಎ.2: ಈಗಾಗಲೇ 82 ಮಂದಿ ಕೈದಿಗಳಿಗೆ ಮರಣದಂಡನೆ ವಿಧಿಸಿರುವ ಸೌದಿ ಅರೇಬಿಯಾ ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ಮಂದಿಗೆ ಮರಣದಂಡನೆ ವಿಧಿಸಲು ಸಜ್ಜಾಗಿದೆ ಎಂದು ಮಾನವ ಹಕ್ಕು ಸಂಘಟನೆ ಬಿಡುಗಡೆಗೊಳಿಸಿರುವ ಹೊಸ ಅಂಕಿ-ಅಂಶಗಳಲ್ಲಿ ಬಹಿರಂಗವಾಗಿದೆ.
ಸೌದಿ ಅರೇಬಿಯಾದ ಈ ಕ್ರಮ ಅರಬ್ ರಾಷ್ಟ್ರಗಳು ಹಾಗೂ ಬ್ರಿಟನ್ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಬ್ರಿಟಿಷ್ ಸರಕಾರ ಮರಣ ದಂಡನೆ ಶಿಕ್ಷೆಯನ್ನು ನಿಲ್ಲಿಸುವಂತೆ ಗಲ್ಫ್ ರಾಷ್ಟ್ರಕ್ಕೆ ಒತ್ತಡ ಹೇರುತ್ತಾ ಬಂದಿದೆ.
2014ರಲ್ಲಿ 88 ಮಂದಿ ಆರೋಪಿಗಳ ಶಿರಚ್ಛೇದ ನಡೆಸಿದ್ದ ಸೌದಿ ಅರೇಬಿಯಾ ಕಳೆದ ವರ್ಷ 158 ಮಂದಿಗೆ ಮರಣದಂಡನೆ ವಿಧಿಸಿತ್ತು. ಈಗಾಗಲೇ 82 ಮಂದಿಯನ್ನು ಶಿರಚ್ಛೇದ ನಡೆಸಿರುವ ಸೌದಿ ಸರಕಾರ ಈ ವರ್ಷದ ಅಂತ್ಯಕ್ಕೆ 320ಕ್ಕೂ ಅಧಿಕ ಮಂದಿಯನ್ನು ಮರಣ ದಂಡನೆ ಶಿಕ್ಷೆಗೆ ಗುರಿಪಡಿಸುವ ಸಾಧ್ಯತೆಯಿದ್ದು, ಇದು ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಲಿದೆ.
ಸೌದಿ ಸರಕಾರ ಹಾಗೂ ಸ್ಥಳೀಯ ಮಾಧ್ಯಮ ವರದಿಗಳನ್ನು ಆಧರಿಸಿ ಬ್ರಿಟನ್ ಮೂಲದ ಮಾನವ ಹಕ್ಕು ಸಂಘಟನೆ ಅಂಕಿ-ಅಂಶವನ್ನು ಕಲೆಹಾಕಿದೆ. ಇತ್ತೀಚೆಗಷ್ಟೇ ಸೌದಿ ಅರೇಬಿಯಕ್ಕೆ ಭೇಟಿ ನೀಡಿದ್ದ ಬ್ರಿಟನ್‌ನ ರಕ್ಷಣಾ ಕಾರ್ಯದರ್ಶಿ ಮೈಕ್ ಫಾಲ್ಲನ್, ರಾಜಕುಮಾರ ಮುಹಮ್ಮದ್ ಬಿನ್ ನಾಫ್ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್‌ರನ್ನು ಭೇಟಿಯಾಗಿ ಯುಕೆ-ಸೌದಿಯ ರಕ್ಷಣಾ ಸಂಬಂಧವನ್ನು ಬಲಿಷ್ಠ ಗೊಳಿಸಲು ನೆರವಾಗುವಂತೆ ಕೋರಿದ್ದರು.
ಅಬ್ದುಲ್ ಅಝೀಝ್ ಅಲ್ ಸೌದ್ ಮರಣದಂಡನೆ ಶಿಕ್ಷೆಯ ಜಾರಿಯ ಮೇಲುಸ್ತುವಾರಿಯನ್ನು ವಹಿಸಿದ್ದಾರೆ. ಆದರೆ, ಈ ಭೇಟಿಯ ಬಳಿಕ ಇಬ್ಬರು ಕೈದಿಗಳ ಶಿರಚ್ಛೇದ ನಡೆಸಲಾಗಿತ್ತು.







