ಕಾರ್ಕಳ : ಅನಧೀಕೃತ ಕಟ್ಟಡ ಕಾಮಗಾರಿ- ತಡೆ ಹಿಡಿದ ಅಧಿಕಾರಿಗಳು

ಅನಧೀಕೃತ ಕಟ್ಟಡ ನಿರ್ಮಾಣವನ್ನು ಪೊಲೀಸ್ ರಕ್ಷಣೆಯೊಂದಿಗೆ ತಡೆಹಿಡಿದ ಮುಖ್ಯಾಧಿಕಾರಿ
ಕಾರ್ಕಳ : ಅನಧೀಕೃತ ಕಟ್ಟಡ ನಿರ್ಮಾಣ ವಿರುದ್ದ ನೋಟೀಸ್ ಜಾರಿ ಮಾಡಿದ್ದರೂ, ಖ್ಯಾರೇ ಎನ್ನದ ಮಾಲಿಕರು ಎರಡಂತಸ್ತಿನ ಕಟ್ಟಡ ನಿರ್ಮಾಣ ಕೈಗೊಂಡಿರುವುದನ್ನು ಗಮನಿಸಿ ಪುರಸಭೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ತಡೆಹಿಡಿದ ಘಟನೆ ರಥಬೀದಿಯಲ್ಲಿ ಶನಿವಾರ ನಡೆದಿದೆ.
ಕಾರ್ಪೋರೇಶನ್ ಬ್ಯಾಂಕಿನ ಮುಂಬದಿಯ ಖಾಸಗಿ ಕಟ್ಟಡದಲ್ಲಿ ಅಂತಸ್ತನ್ನು ನಿರ್ಮಿಸುವ ಕಾಮಗಾರಿ ಆರಂಭಗೊಂಡಿದೆ. ಆದರೆ ಸೆಟ್ಬ್ಯಾಕ್ ಹಾಗೂ ಪಾರ್ಕಿಂಗ್ ವ್ಯವಸ್ಥೆಯಿಲ್ಲದೆ ಪುರಸಭೆಯ ನಿಯಮಗಳನ್ನು ಗಾಳಿಗೆ ತೂರಲಾಗಿದ್ದ ಪರಿಣಾಮ, ಪುರಸಭೆ ಈ ಕ್ರಮಕ್ಕೆ ಮುಂದಾಗಿದೆ.ಸಂಬಂಧಿಸಿದ ಮಾಲಿಕರಿಗೆ ಮಾ.31ರಂದು ನೋಟೀಸ್ ಜಾರಿ ಮಾಡಲಾಗಿತ್ತಾದರೂ, ಪ್ರಯೋಜನವಾಗಿಲ್ಲದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳ ತಂಡ ಪೊಲೀಸ್ ರಕ್ಷಣೆಯೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸಂಪೂರ್ಣ ತಡೆಹಿಡಿದಿದೆ.
ಈ ಸಂದರ್ಭ ಪುರಸಭೆ ಅಭಿಯಂತರ ದುರ್ಗಪ್ರಸಾದ್, ಆರೋಗ್ಯ ಪರಿವೀಕ್ಷಕ ಸುಂದರ ಪೂಜಾರಿ, ಸಿಬ್ಬಂದಿಗಳಾದ ಜಗನ್ನಾಥ್ ಮತ್ತಿತರರು ಜತೆಗಿದ್ದರು.
ಕರ್ತವ್ಯ ಅಡ್ಡಿ :
ಅಂಗಡಿಯ ಸೆಕ್ಯೂರಿಟಿ ಗಾರ್ಡ್ವೊಬ್ಬ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳ ತಂಡವನ್ನು ತಡೆಹಿಡಿದು, ಒಳ ಪ್ರವೇಶಿಸದಂತೆ ಅಡ್ಡಿಪಡಿಸಿದ ಘಟನೆ ಕೂಡಾ ಇದೇ ಸಂದರ್ಭದಲ್ಲಿ ನಡೆದಿತ್ತು.
ಅನಧೀಕೃತದ ವಿರುದ್ದ ಕ್ರಮ :
ಪುರಸಭೆಯ ನಿಯಮ ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾದಲ್ಲಿ ಅಂತವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ನೋಟೀಸ್ ಜಾರಿ ಮಾಡಿದ ಬಳಿಕವೂ ನಿಯಮ ಉಲ್ಲಂಘಿಸಿದ್ದಲ್ಲಿ ಪುರಸಭೆ ಕಾಯ್ದೆ 1964ರ ಸೆಕ್ಷನ್ 187ರಂತೆ ಕಾನೂನು ಕ್ರಮ ತೆಗೆದುಕೊಂಡು ಕಟ್ಟಡವನ್ನು ನೆಲಸಮ ಮಾಡುವ ಅಧಿಕಾರ ಪುರಸಭೆಗಿದೆ ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.







