ಮಸೂದ್‌ನನ್ನು ಭಯೋತ್ಪಾದಕ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ: ಚೀನಾ

ವಿಶ್ವಸಂಸ್ಥೆ, ಎ. 2: ಪಾಕಿಸ್ತಾನದ ಜೈಶೆ ಮುಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆ ದಿಗ್ಬಂಧನ ವಿಧಿಸಬೇಕಾದ ಭಯೋತ್ಪಾದಕ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬ ಚೀನಾದ ನಿಲುವನ್ನು ವಿಶ್ವಸಂಸ್ಥೆಯಲ್ಲಿ ಚೀನಾದ ಖಾಯಂ ಪ್ರತಿನಿಧಿ ಲಿಯು ಜಿಯೇಯಿ ಪುನರುಚ್ಚರಿಸಿದ್ದಾರೆ.
ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ಸೂತ್ರಧಾರಿ ಮಸೂದ್‌ಗೆ ನಿಷೇಧ ವಿಧಿಸಬೇಕು ಎಂದು ಕೋರಿ ಭಾರತ ಮಂಡಿಸಿದ್ದ ನಿರ್ಣಯಕ್ಕೆ ಚೀನಾ ವೀಟೊ ಚಲಾಯಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಭದ್ರತಾ ಮಂಡಳಿಯ ಸರದಿ ಅಧ್ಯಕ್ಷತೆಯನ್ನು ವಹಿಸಿದ ಬಳಿಕ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓರ್ವನನ್ನು ಭಯೋತ್ಪಾದಕ ಎಂಬುದಾಗಿ ಪರಿಗಣಿಸಲು ಭದ್ರತಾ ಮಂಡಳಿ ವಿಧಿಸಿರುವ ಮಾನದಂಡಗಳಿಗೆ ಅವನು ಒಗ್ಗುವುದಿಲ್ಲ ಎಂದರು.
‘‘ವಿಶ್ವಸಂಸ್ಥೆಯ ದಿಗ್ಬಂಧನಗಳ ಪಟ್ಟಿಯಲ್ಲಿರುವ ವ್ಯಕ್ತಿಗಳು ಮತ್ತು ಸಂಘಟನೆಗಳು ನಿರ್ದಿಷ್ಟ ಮಾನದಂಡಗಳನ್ನು ಪೂರೈಸಬೇಕು. ಪ್ರತಿ ಮಾನದಂಡವನ್ನೂ ಅನುಸರಿಸಲಾಗಿದೆ ಎಂಬುದನ್ನು ಖಾತರಿಪಡಿಸುವ ಹೊಣೆ ಭದ್ರತಾ ಸಮಿತಿಯ ಎಲ್ಲ ಸದಸ್ಯರದ್ದು’’ ಎಂದರು.
ಯಾವ ರೀತಿಯಲ್ಲಿ ಮಸೂದ್ ಭಯೋತ್ಪಾದಕ ಆಗುವುದಿಲ್ಲ ಎಂಬ ಪ್ರಶ್ನೆಗೆ, ‘‘ಮಂಡಳಿಯ ಅಗತ್ಯಗಳ ಪ್ರಕಾರ’’ ಎಂದಷ್ಟೇ ಚೀನಾ ರಾಯಭಾರಿ ಉತ್ತರಿಸಿದರು.
ಜನವರಿ 2ರಂದು ಪಠಾಣ್‌ಕೋಟ್ ವಾಯು ನೆಲೆಯ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕ, ಮಸೂದ್‌ನನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಬೇಕು ಎಂಬುದಾಗಿ ಭಾರತ ವಿಶ್ವಸಂಸ್ಥೆಯ ದಿಗ್ಬಂಧನೆ ಸಮಿತಿಗೆ ಫೆಬ್ರವರಿಯಲ್ಲಿ ಮನವಿ ಮಾಡಿತ್ತು.
ಭಾರತ ಮಂಡಿಸಿದ ನಿರ್ಣಯ ಜಾರಿಗೆ ಬಂದಿದ್ದರೆ ಪಾಕಿಸ್ತಾನ ಮತ್ತು ಇತರ ದೇಶಗಳು ಮಸೂದ್‌ನ ಸೊತ್ತುಗಳನ್ನು ಸ್ಥಗಿತಗೊಳಿಸಬೇಕಾಗಿತ್ತು ಹಾಗೂ ಆತನ ಪ್ರಯಾಣವನ್ನು ನಿಷೇಧಿಸಬೇಕಾಗಿತ್ತು.
ಇತರ ಎಲ್ಲ 14 ಸದಸ್ಯರು ಮಸೂದ್‌ನಿಗೆ ಭಯೋತ್ಪಾದಕ ಪಟ್ಟ ಕಟ್ಟಲು ಸಿದ್ಧರಿದ್ದರೂ ಚೀನಾ ವೀಟೊ ಚಲಾಯಿಸಿತು.







