ಮಂಗಳೂರು: ಪೊಲೀಸ್ ಧ್ವಜ ದಿನಾಚರಣಾ ಕಾರ್ಯಕ್ರಮ
ಮಂಗಳೂರು,ಎ.2:ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸುವ ಮನೋಭಾವ ಪೊಲೀಸರಿಗಿದ್ದರೆ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎನ್‌ಬಿ ಶೇಖರಪ್ಪ ಹೇಳಿದರು.
ಅವರು ನಗರದ ಪೊಲೀಸ್ ಮೈದಾನದಲ್ಲಿ ಇಂದು ನಡೆದ ಪೊಲೀಸ್ ಧ್ವಜ ದಿನಾಚರಣಾ ಕಾರ್ಯಕ್ರಮದಲ್ಲಿ ಪೊಲೀಸ್ ಧ್ವಜ ಬಿಡುಗಡೆಗೊಳಿಸಿ ಮಾತನಾಡಿದರು.
ಪೊಲೀಸರಲ್ಲಿ ತಾಳ್ಮೆ, ಧೈರ್ಯ ಹಾಗೂ ಅರಿವು ಮುಖ್ಯ ವಾಗಿರಬೇಕು.ಸಮಾಜದ ಆರೋಗ್ಯ ಕಾಪಾಡುವಲ್ಲಿ ಪೊಲೀಸರು ಇನ್ನೂ ಹೆಚ್ಚು ಕಾರ್ಯೋನ್ಮುಕವಾಗಬೇಕು, ತಮ್ಮ ದೈಹಿಕ ಕ್ಷಮತೆ ಕಾಪಾಡಲು ಹೆಚ್ಚು ಶ್ರಮವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ 70 ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ, ಪಿಯುಸಿ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಪೊಲೀಸ್ ಸಿಬ್ಬಂದಿಗಳ ಮಕ್ಕಳಿಗೆ ದಿ.ಬೋಳ ಪುಷ್ಪರಾಜ್ ಶೆಟ್ಟಿ ಸ್ಮರಣಾರ್ಥ ಬೋಳ ಪುಷ್ಪರಾಜ್ ಶೆಟ್ಟಿ ಸಹೋದರಿ ನಳಿನಿ ಎಸ್.ಭಂಡಾರಿ ಧನಸಹಾಯವನ್ನು ಮಾಡಿದರು. ಕೆಎಸ್‌ಆರ್‌ಪಿ, ಡಿಎಆರ್/ಸಿಎಆರ್, ಮಂಗಳೂರು ಸಿಟಿ ಪೊಲೀಸ್, ಮಹಿಳಾ ಪೊಲೀಸ್ ಪಡೆ, ದ.ಕ ಜಿಲ್ಲಾ ಪೊಲೀಸ್ ಪಡೆಗಳು ಧ್ವಜ ವಂದನೆ ಸ್ವೀಕರಿಸಿದರು.
ಪಶ್ಚಿಮ ವಲಯ ಐಜಿಪಿ ಅಮೃತ್ ಪೌಲ್ ,ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ಎಂ,ದ.ಕ ಜಿಲ್ಲಾ ಎಸ್‌ಪಿ ಡಾ. ಶರಣಪ್ಪ ಉಪಸ್ಥಿತರಿದ್ದರು.







