ಪರಮಾಣು ಬೆದರಿಕೆ ತಗ್ಗಿಸಲು ಭಾರತ, ಪಾಕ್ ಶ್ರಮಿಸಲಿ: ಒಬಾಮ

ವಾಶಿಂಗ್ಟನ್, ಎ. 2: ಭಾರತ ಮತ್ತು ಪಾಕಿಸ್ತಾನಗಳೆರಡೂ ಉಪಖಂಡದ ಗಂಭೀರ ಪರಮಾಣು ಬೆದರಿಕೆಯನ್ನು ತಗ್ಗಿಸಲು ಶ್ರಮಿಸಬೇಕಾಗಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
‘‘ಭಾರತ ಮತ್ತು ಪಾಕಿಸ್ತಾನಗಳಲ್ಲಿ ಅಭಿವೃದ್ಧಿಯನ್ನು ಕಾಣಲು ನಾವು ಬಯಸುತ್ತೇವೆ ಹಾಗೂ ತಾವು ನಿರಂತರವಾಗಿ ತಪ್ಪು ದಾರಿಯಲ್ಲಿ ಹೋಗುವುದಿಲ್ಲ ಎಂಬ ಸೇನಾ ಸಿದ್ಧಾಂತವನ್ನು ಈ ದೇಶಗಳು ಬೆಳೆಸಿಕೊಳ್ಳಬೇಕು’’ ಎಂದು ಇಲ್ಲಿ ನಡೆಯುತ್ತಿರುವ ಪರಮಾಣು ಭದ್ರತಾ ಶೃಂಗಸಭೆಯಲ್ಲಿ ಅವರು ಹೇಳಿದರು.
ಕೆಲವು ದೇಶಗಳಲ್ಲಿ ಪರಮಾಣು ಅಸ್ತ್ರಗಳು, ಅದರಲ್ಲೂ ಮುಖ್ಯವಾಗಿ ಕಳ್ಳತನದ ಭಾರೀ ಅಪಾಯವನ್ನು ಎದುರಿಸುತ್ತಿರುವ ಸಣ್ಣ ಪರಮಾಣು ಅಸ್ತ್ರಗಳು ಭಾರೀ ಪ್ರಮಾಣದಲ್ಲಿ ಹೆಚ್ಚೆುತ್ತಿರುವ ಬಗ್ಗೆ ಒಬಾಮ ಆತಂಕ ವ್ಯಕ್ತಪಡಿಸಿದರು.
ಪಾಕಿಸ್ತಾನವನ್ನು ಉದ್ದೇಶಿಸಿ ಅವರು ಈ ಹೇಳಿಕೆ ನೀಡಿದ್ದಾರೆ ಎಂಬುದಾಗಿ ವ್ಯಾಪಕವಾಗಿ ಭಾವಿಸಲಾಗಿದೆ. ಪಾಕಿಸ್ತಾನ ಸಣ್ಣ ಹಾಗೂ ವ್ಯೆಹಾತ್ಮಕ ಪರಮಾಣು ಅಸ್ತ್ರಗಳನ್ನು ಭಾರೀ ಪ್ರಮಾಣದಲ್ಲಿ ಕಲೆ ಹಾಕುತ್ತಿದೆ.
ಇಂಥ ಅಸ್ತ್ರಗಳನ್ನು ಐಸಿಸ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಕಳವು ಮಾಡುವ ಅಪಾಯ ಹೆಚ್ಚಾಗಿದೆ ಎಂಬ ಭೀತಿಯನ್ನು ಒಬಾಮ ಆಡಳಿತ ಮತ್ತು ಅಂತಾರಾಷ್ಟ್ರೀಯ ಸಮುದಾಯ ಹೊಂದಿದೆ.
‘ಹುಚ್ಚ’ರಿಗೆ ಪರಮಾಣು ಸಾಮಗ್ರಿಗಳು ಸಿಗಬಾರದು
ಐಸಿಸ್ ಮುಂತಾದ ಸಂಘಟನೆಗಳ ‘‘ಹುಚ್ಚ’’ರಿಗೆ ಪರಮಾಣು ಅಸ್ತ್ರ ಅಥವಾ ವಿಕಿರಣಶೀಲ ‘‘ಡರ್ಟಿ ಬಾಂಬ್’’ ಸಿಗದಂತೆ ಖಾತರಿಪಡಿಸುವುದಕ್ಕಾಗಿ ಸುಲಭ ದಾಳಿಗೆ ಈಡಾಗಬಹುದಾದ ಪರಮಾಣು ಸಂಸ್ಥಾಪನೆಗಳ ಸಂರಕ್ಷಣೆಗೆ ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ವಿಶ್ವ ನಾಯಕರನ್ನು ಒತ್ತಾಯಿಸಿದ್ದಾರೆ.
ವಾಶಿಂಗ್ಟನ್‌ನಲ್ಲಿ ನಡೆಯುತ್ತಿರುವ ಪರಮಾಣು ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪರಮಾಣು ಭಯೋತ್ಪಾದನೆಯ ಅಪಾಯಗಳನ್ನು ಕಡಿಮೆ ಮಾಡುವ ಪ್ರಯತ್ನಗಳ ಹೊರತಾಗಿಯೂ ಈ ಬೆದರಿಕೆಯನ್ನು ಜಗತ್ತು ನಿರಂತರವಾಗಿ ಎದುರಿಸುತ್ತಿದೆ ಎಂದು ಅವರು ನುಡಿದರು.







