ಮೃತ ರೆತ ದಿನೇಶ್ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ
ರಾಜ್ಯ ರೆತ ಸಂಘದ ಜಿಲ್ಲಾ ಘಟಕದಿಂದ ಡಿಸಿಗೆ ಮನವಿ

ಮಡಿಕೇರಿ, ಎ.2: ಇತ್ತೀಚೆಗೆ ವೀರಾಜಪೇಟೆ ತಾಲೂಕಿನ ಕಾರ್ಮಾಡು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಡ ರೈತ ಕೊಟ್ಟಂಗಡ ದಿನೇಶ್ ಅವರ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಸಾಲದ ಬಾಧೆಯಿಂದ ದಿನೇಶ್ ಮೃತಪಟ್ಟಿದ್ದು, ಬಡತನದಲ್ಲಿರುವ ಕುಟುಂಬಕ್ಕೆ ಯಾವುದೇ ಆದಾಯ ಮೂಲಗಳಿರುವುದಿಲ್ಲ. ಆದ್ದರಿಂದ ಸರಕಾರ ಕುಟುಂಬದ ನೆರವಿಗೆ ಬರಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮನವಿ ಮಾಡಿದರು.
ಒಡವೆ ಸಾಲ ಮತ್ತು ಬ್ಯಾಂಕ್ ಸಾಲ ಮಾಡಿದ್ದ ದಿನೇಶ್ ಅವರು ಸಾಲವನ್ನು ತೀರಿಸಲಾಗದೆ ಸಂಕಷ್ಟವನನ್ನು ಎದುರಿಸುತ್ತಿದ್ದರು. ಅಸಹಾಯಕ ಸ್ಥಿತಿಯಲ್ಲಿದ್ದ ಇವರು ಆತ್ಮಹತ್ಯೆಗೆ ಶರಣಾಗಿದ್ದು, ಸರಕಾರ ತಕ್ಷಣ ಕುಟುಂಬದ ಮನವಿಗೆ ಸ್ಪಂದಿಸಬೇಕು ಎಂದರು.
ಸಂಕಷ್ಟದಲ್ಲಿರುವ ರೈತನ ಪತ್ನಿ ಮತ್ತು ಇಬ್ಬರು ಮಕ್ಕಳು ಮರದ ಸೇತುವೆಯನ್ನು ಅವಲಂಬಿಸಿ ಮನೆಗೆ ತೆರಳಬೇಕಾಗಿದ್ದು, ಓಡಾಡಲು ಸೂಕ್ತ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಮನು ಸೋಮಯ್ಯ ಒತ್ತಾಯಿಸಿದರು.





