ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿ ಗ್ರಾಮಸ್ಥರ ಧರಣಿ
ನಕಲಿ ದಾಖಲೆ ಸೃಷ್ಟಿ: ಪರಿಸರವಾದಿಗಳ ಆರೋಪ
ಶಿವಮೊಗ್ಗ, ಎ.2: ಜಿಲ್ಲೆಯ ಶಿಕಾರಿಪುರ ತಾಲೂಕು ಕಸಬಾ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿರುವ ‘ದೊಡ್ಡಕೆರೆ’ ಪ್ರದೇಶದಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವುದನ್ನು ತೆರವುಗೊಳಿಸಿ, ಕೆರೆ ಪ್ರದೇಶ ಸಂರಕ್ಷಣೆ ಮಾಡಬೇಕೆಂದು ಆಗ್ರಹಿಸಿ ಮಲ್ಲಾಪುರ ದೊಡ್ಡಕೆರೆ ಅಚ್ಚುಕಟ್ಟುದಾರರು ಹಾಗೂ ಸ್ಥಳೀಯ ಪರಿಸರವಾದಿಗಳು ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ದೊಡ್ಡಕೆರೆ ತೂಬು ಮತ್ತು ಏರಿ ಭಾಗ ಒಡೆದು ಕೆಲವರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ. ಕೆರೆಯ ಒತ್ತುವರಿ ಭಾಗ ಗುರುತಿಸಲು ನಿಯೋಜಿಸಲಾಗಿದ್ದ ಸರ್ವೇಯರ್‌ರೊಬ್ಬರು ಅಕ್ರಮ ಸಾಗುವಳಿದಾರರಿಗೆ ಕೆರೆಯ ಜಮೀನು ಮಂಜೂರು ಮಾಡಿ, ದಾಖಲೆ ಸೃಷ್ಟಿಸಿ ಕೊಟ್ಟಿದ್ದಾರೆ. ಇದರಲ್ಲಿ ಸ್ಥಳೀಯ ಗ್ರಾಪಂನ ಕೆಲ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ದೊಡ್ಡಕೆರೆಯ ಬಗ್ಗೆ ಮರು ಸರ್ವೇ ನಡೆಸಬೇಕು. ಒತ್ತುವರಿ ತೆರವುಗೊಳಿಸಿ, ಕೆರೆ ಸಂರಕ್ಷಣೆ ಮಾಡಬೇಕು. ಹಾಗೆಯೇ ಒತ್ತುವರಿದಾರರಿಗೆ ನಕಲಿ ದಾಖಲೆ ಸೃಷ್ಟಿಸಿ, ಅವರಿಗೆ ಬೆಂಬಲವಾಗಿ ನಿಂತಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ದುರ್ಬಳಕೆಯಾಗುತ್ತಿದೆ: ಅರಣ್ಯ ಹಕ್ಕು ಕಾಯ್ದೆ ದುರ್ಬಳಕೆಯಾಗುತ್ತಿದೆ. ಇದರಿಂದ ಅರಣ್ಯ ನಾಶವಾಗುತ್ತಿದೆ. ಕಾಯ್ದೆಗೆ ಅನುಗುಣವಾಗಿ ಸಾಗುವಳಿ ನಡೆಸುತ್ತಿರುವವರಿಗೆ, ಸೂಕ್ತ ಫಲಾನುಭವಿಗಳಿಗೆ ಜಮೀನು ನೀಡಬೇಕು. ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಮತ್ತು ಕಂದಾಯ-ಅರಣ್ಯ ಇಲಾಖೆ ನೌಕರರ ಸಹಾಯದಿಂದ ಅರಣ್ಯ ಪ್ರದೇಶದಲ್ಲಿ ಅಕ್ರಮ ಸಾಗುವಳಿ ಹೆಚ್ಚಾಗುತ್ತಿದೆ. ದಾಖಲೆಗಳ ದೃಢೀಕರಣದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕುಮದ್ವತಿ ನದಿ ಮತ್ತು ವೃಷಭಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆೆ ನಡೆಯುತ್ತಿದೆ. ತಾಪಂ ಅಧಿಕಾರಿಗಳು ಅಕ್ರಮವಾಗಿ ಮರಳು ಗಣಿಗಾರಿಕೆಗೆ ಪರವಾನಿಗೆ ನೀಡುವ ಮೂಲಕ ಲೂಟಿಕೋರರಿಗೆ ಸಹಾಯ ಮಾಡುತ್ತಿದ್ದಾರೆ. ಇದರಿಂದ ದನಕರುಗಳಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಸಹಾಯ ಮಾಡಿ: ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಮನೆ ಮಾಡಿದೆ. ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಕೃಷಿ ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ಸಾಲ ಮರು ಪಾವತಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾಲ ಮರು ಪಾವತಿಗೆ ಒಂದು ವರ್ಷದ ವಿನಾಯಿತಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆಯ ನೇತೃತ್ವವನ್ನು ಮಾಜಿ ಸೈನಿಕ ಪಿ.ವೈ.ರವಿ ವಹಿಸಿದ್ದರು. ರೈತ ಮುಖಂಡರಾದ ಹಾಲೇಶಪ್ಪ, ಬಸವರಾಜ್, ಎಂ. ಜಯಲಿಂಗಪ್ಪ, ಡಿ.ಎಸ್.ಈಶ್ವರಪ್ಪ, ಎ.ಎಚ್.ಮಾರುತಿ, ಹಾಲಪ್ಪ, ಎಸ್.ಬಿ.ಚನ್ನವೀರಪ್ಪಮತ್ತಿತರರು ಉಪಸ್ಥಿತರಿದ್ದರು.





