‘ಭಾರತ್ ಮಾತಾ ಕಿ ಜೈ’ ಘೋಷಣೆ ಹಿಂದಿನ ಕೋಮು ರಾಜಕೀಯ....
ಬಿಜೆಪಿ ಸರಕಾರ ಅಧಿಕಾರಕ್ಕೇರಿದಾಗಿನಿಂದ ವಾಕ್ ಸ್ವಾತಂತ್ರ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕುಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿದೆ. ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ಈ ಸರಕಾರವು ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಂದ ‘ಭಾರತ್ ಮಾತಾ ಕಿ ಜೈ ’ ಎಂಬ ಘೋಷಣೆಗಳನ್ನು ಬಲವಂತವಾಗಿ ಕೂಗಿಸಲು ಪಟ್ಟು ಹಿಡಿದಿದೆ. ‘ಭಾರತ್ ಮಾತಾ ಕಿ ಜೈ ’ಘೋಷಣೆ ಕುರಿತಾದ ಚರ್ಚೆಯು ಜನತೆಯ ನಡುವೆ ಮತ್ತೊಮ್ಮೆ ಕೋಮು ಉದ್ವಿಗ್ನತೆಯನ್ನು ಭುಗಿಲೆಬ್ಬಿಸಿದೆ. ಆರೆಸ್ಸೆಸ್ ಹಾಗೂ ಬಿಜೆಪಿಯ ಮೂಲಭೂತವಾದಿ ‘ಪದಕೋಶ’ವು ದೇಶದಲ್ಲಿ ಒಡಕನ್ನು ಸೃಷ್ಟಿಸತೊಡಗಿದೆ. 1980ರ ದಶಕದ ಅಂತ್ಯದಲ್ಲಿ ಸಂಘಪರಿವಾರವು ರಾಮದೇವಾಲಯ ನಿರ್ಮಾಣ ಅಭಿಯಾನ ನಡೆಸಿದ ಸಂದರ್ಭದಲ್ಲಿ ಜನರಿಂದ ಬಲವಂತವಾಗಿ ‘ ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿಸಲಾಗುತ್ತಿತ್ತು, ಮುಂಬೈಯಲ್ಲಿ ಕೂಡಾ ಇಂತಹದ್ದೇ ಸನ್ನಿವೇಶವಿತ್ತು. ಅಲ್ಲಿ ಬಿಜೆಪಿಯ ಜೊತೆಗಾರ ಪಕ್ಷವಾದ ಶಿವಸೇನೆಯು ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿಂದ ‘ ಜೈ ಶ್ರೀರಾಮ್’ ಹಾಗೂ ‘ಜೈ ಮಹಾರಾಷ್ಟ್ರ ’ಎಂಬಿತ್ಯಾದಿ ಘೋಷಣೆಗಳನ್ನು ಬಲವಂತವಾಗಿ ಹೇಳಿಸುತ್ತಿತ್ತು. 2014ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಬಿಜೆಪಿಯು, ತನ್ನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ವೈಭವೀಕರಿಸಲು ‘ವಿಕಾಸಪುರುಷ್’ನಂತಹ ಘೋಷಣೆಗಳನ್ನು ಬಳಸಿಕೊಂಡಿತ್ತು.
ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ‘ಸಾಂಸ್ಥಿಕ ಹತ್ಯೆ’ಯು ನಿರಂತರ ಕಿರುಕುಳ ಹಾಗೂ ಜಾತಿ ತಾರತಮ್ಯದ ಪರಿಣಾಮವಾಗಿದೆ. ಈ ಪ್ರಕರಣದ ಮುಖ್ಯ ತಪ್ಪಿತಸ್ಥನಾದ ಹೈದರಾಬಾದ್ ವಿವಿ ಉಪಕುಲಪತಿ ಅಪ್ಪಾರಾವ್, ತನ್ನ ಬಟ್ಟೆಗೆ ಅಂಟಿದ ರಕ್ತದ ಕಲೆಗಳನ್ನು ಸುಲಭವಾಗಿ ತೊಳೆಯಬಹುದೆಂದು ಯೋಚಿಸಿದ್ದರು. ಆದಾಗ್ಯೂ ವಿವಿಧ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಆತ ಎಸಗಿದ ಅಪರಾಧದ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲಾರಂಭಿಸಿದರು. ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರ ವಿದ್ಯಾರ್ಥಿಗಳು ಬೀದಿಗಿಳಿದು ಬಂಡಾಯದ ಧ್ವನಿಯನ್ನು ಮೊಳಗಿಸಿದರು.
ಸಾರ್ವಜನಿಕರ ಆಕ್ರೋಶವನ್ನು ನಿಯಂತ್ರಿಸಲು ಸಾಧ್ಯವಾಗದೆ ಕೈಚೆಲ್ಲಿದ ನಿರಂಕುಶವಾದಿ ಬಿಜೆಪಿ ಸರಕಾರವು, ವೇಮುಲಾ ಆತ್ಮಹತ್ಯೆ ಪ್ರಕರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಕಲ ಪ್ರಯತ್ನಗಳನ್ನು ನಡೆಸಿತಾದರೂ, ಅವೆಲ್ಲವೂ ವಿಫಲವಾದವು. ಇಂತಹ ಸನ್ನಿವೇಶದಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಗೆ ರೋಷತಪ್ತ ಸಾರ್ವಜನಿಕರನ್ನು ಬೇರೆಡೆಗೆ ಸೆಳೆಯಲು ಅದಕ್ಕೆ ಸೂಕ್ತ ಅವಕಾಶವೊಂದು ದೊರೆಯಿತು. 2001ರಲ್ಲಿ ಸಂಸತ್‌ಭವನದ ದಾಳಿ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಲ್ಪಟ್ಟ ಅಫ್ಝಲ್‌ಗುರುವನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಫೆಬ್ರವರಿ 9ರಂದು ಜೆಎನ್‌ಯುನಲ್ಲಿ ಕಾರ್ಯಕ್ರಮವೊಂದು ನಡೆದಿತ್ತು. 2013ರಿಂದೀಚೆಗೆ ವಿದ್ಯಾರ್ಥಿಗಳ ಗುಂಪೊಂದು ಈ ಕಾರ್ಯಕ್ರಮವನ್ನು ಆಯೋಜಿಸುತ್ತಲೇ ಬಂದಿದೆ. ಬಿಜೆಪಿ ಹಾಗೂ ಆರೆಸ್ಸೆಸ್‌ಗೆ ನಿಷ್ಠವಾಗಿರುವ ಸುದ್ದಿ ಚಾನೆಲ್‌ಗಳು, ಆ ಕಾರ್ಯಕ್ರಮದಲ್ಲಿ ಭಾರತ ವಿರೋಧಿ ಹಾಗೂ ಪಾಕ್ ಪರ ಘೋಷಣೆಗಳನ್ನು ಕೂಗಲಾಗುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಿದ್ದವು. ರೋಹಿತ್ ವೇಮುಲಾನ ‘ಸಾಂಸ್ಥಿಕ ಹತ್ಯೆ’ ಪ್ರಕರಣದಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಇದು ಸುಸಂದರ್ಭವೆಂದು ಭಾವಿಸಿದ ಎಬಿವಿಪಿ ಜೆಎನ್‌ಯುನಲ್ಲಿ ನಡೆದ ಕಾರ್ಯಕ್ರಮವು ದೇಶವಿರೋಧಿಯೆಂದು ಘೋಷಿಸಿತು.
ಜಾತಿ ಹಾಗೂ ಕೋಮು ಆಧಾರದಲ್ಲಿ ದೇಶದ ಜನತೆಯನ್ನು ವಿಭಜನೆಗೊಳಿಸುವುದು ಬಿಜೆಪಿ ಹಾಗೂ ಸಂಘಪರಿವಾರದ ರಾಜಕೀಯ ಚಾಳಿಯಾಗಿದೆ. ಇದರಿಂದಾಗಿ ದೇಶದ ಪ್ರಜಾತಾಂತ್ರಿಕ ಸಂರಚನೆಗೆ ಹಾನಿಯಾಗಿದೆ. ಬೀಫ್ ನಿಷೇಧ, ಸ್ವತಂತ್ರ ಚಿಂತಕರು ಹಾಗೂ ಸಾರ್ವಜನಿಕ ಬುದ್ಧಿಜೀವಿಗಳ ಮೇಲೆ ಹಲ್ಲೆ ನಡೆಸುವುದು,ವಾಕ್ ಸ್ವಾತಂತ್ರ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕುಗಳನ್ನು ಹತ್ತಿಕ್ಕುವುದು ಈಗಿನ ಕೇಂದ್ರ ಸರಕಾರವು ತನ್ನ ವಿರುದ್ಧ ಕೇಳಿಬರುತ್ತಿರುವ ಭಿನ್ನಮತದ ಧ್ವನಿಗಳನ್ನು ಅಡಗಿಸಲು ಅನುಸರಿಸುತ್ತಿರುವ ಕಾರ್ಯತಂತ್ರವಾಗಿದೆ. ಭಾರತವು ಇಂದು ಎದುರಿಸುತ್ತಿರುವ ಹಲವಾರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮಸ್ಯೆಗಳು, ಹಾಲಿ ಸರಕಾರದ ಕೊಡುಗೆಗಳಾಗಿವೆ. ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ದಾದ್ರಿಯ ಮುಹಮ್ಮದ್ ಅಖ್ಲಾಕ್ ಅವರ ಬರ್ಬರ ಹತ್ಯೆ ಹಾಗೂ ರೋಹಿತ್ ವೇಮುಲಾ ಸಾವಿನ ಪ್ರಕರಣ ಮಾತ್ರವೇ ಅಲ್ಲ, ಬಿಜೆಪಿ ನೇತೃತ್ವದ ಸರಕಾರದಡಿಯಲ್ಲಿ ಅನೇಕ ಮಂದಿ ಅಲ್ಪಸಂಖ್ಯಾತರು ಹಾಗೂ ವೈಚಾರಿಕ ಚಿಂತಕರ ವಿರುದ್ಧ ದೌರ್ಜನ್ಯಗಳು ನಡೆದಿರುವುದನ್ನು ನಾವು ಕಂಡಿದ್ದೇವೆ. ‘ಹಿಂಸಾತ್ಮಕ ರಾಷ್ಟ್ರೀಯವಾದ’ವನ್ನು ಕಾನೂನುಬದ್ಧಗೊಳಿಸುತ್ತಿರುವ ಬಿಜೆಪಿ ಹಾಗೂ ಸಂಘಪರಿವಾರದ ರಾಜಕೀಯದಲ್ಲಿ ಹಿಂಸೆಗೆ ಪ್ರಮುಖ ಪಾತ್ರವಿರುವುದನ್ನು ಇದು ಸ್ಪಷ್ಟವಾಗಿ ತೋರಿಸಿಕೊಡುತ್ತದೆ.
ಹಿಂದುತ್ವ ಶಕ್ತಿಗಳು ಪ್ರತಿಪಾದಿಸುತ್ತಿರುವ ರಾಷ್ಟ್ರೀಯತೆಯು ಯಾವಾಗಲೂ ತಾರತಮ್ಯದಿಂದ ಕೂಡಿದೆ ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಹಾಗೂ ದುರ್ಬಲ ವರ್ಗಗಳನ್ನು ಅದರಿಂದ ಹೊರತುಪಡಿಸಲಾಗಿದೆ. ಇದಕ್ಕಿಂತಲೂ ಹೆಚ್ಚಾಗಿ, ಕೆಲವು ನಿರ್ದಿಷ್ಟ ನಂಬಿಕೆಗಳನ್ನು ಪ್ರಶ್ನಿಸುವುದು ಕೂಡಾ ಇಂದು ಕ್ರಿಮಿನಲ್ ಅಪರಾಧವಾಗಿದ್ದು, ಹಾಗೆ ಮಾಡಿದವರನ್ನು ದೇಶದ್ರೋಹಿಗಳೆಂಬಂತೆ ಬಿಂಬಿಸಲಾಗುತ್ತಿದೆ. ‘ಭಾರತ್ ಮಾತಾ ಕಿ ಜೈ’ ಘೋಷಣೆಯ ನಿಜವಾದ ಅರ್ಥವೇನು ಎಂಬುದನ್ನು ಬಿಜೆಪಿಯು ತನ್ನ ರಾಜಕೀಯ ಮಾರ್ಗದರ್ಶಕ ಆರೆಸ್ಸೆಸ್‌ನೊಂದಿಗೆ ಸೇರಿಕೊಂಡು ಆತ್ಮಾವಲೋಕನ ಮಾಡಬೇಕಾಗಿದೆ. ‘ಭಾರತ್ ಮಾತಾ ಕಿ ಜೈ’ ಘೋಷಣೆಯು ಒಂದು ರೀತಿಯ ಆರಾಧನೆಯೇ ಅಥವಾ ಕೇವಲ ಗೌರವಸೂಚಕವೇ ಎಂಬುದನ್ನು ಅವು ಸ್ಪಷ್ಟಪಡಿಸಬೇಕಾಗಿದೆ.
ಭಾರತ್ ಮಾತಾ ಕಿ ಜೈ ಘೋಷಣೆಯ ಹೇರಿಕೆಯು ರಾಷ್ಟ್ರೀಯವಾದದ ಹೆಸರಿನಲ್ಲಿ ಕೋಮು ಉದ್ವಿಗ್ನತೆ ಹಾಗೂ ಪ್ರತ್ಯೇಕವಾದದ ಕಿಡಿಯನ್ನು ಹಚ್ಚುವ ಇನ್ನೊಂದು ಪ್ರಯತ್ನವಾಗಿದೆ. ಭಾರತ್ ಮಾತಾ ಕಿ ಜೈ ಘೋಷಣೆಯನ್ನು ಕೂಗದಿದ್ದುದಕ್ಕಾಗಿ, ಮಹಾರಾಷ್ಟ್ರ ಶಾಸಕ ವಾರಿಸ್ ಪಠಾಣ್‌ರನ್ನು ವಿಧಾನಸಭೆಯಿಂದ ಅಮಾನತುಗೊಳಿಸಿದ ಅಘಾತಕಾರಿ ಘಟನೆಯು ದೇಶದಲ್ಲಿ ಕೋಮುವಾದಿ ರಾಷ್ಟ್ರೀಯವಾದವು ಸಕ್ರಿಯವಾಗಿರುವುದನ್ನು ಸೂಚಿಸುತ್ತದೆ. ಈ ರೀತಿ ನಿರ್ದಿಷ್ಟ ಘೋಷಣೆಗಳನ್ನು ಕೂಗುವಂತೆ ಬಲವಂತಪಡಿಸುವುದು ಹಾಗೂ ಬಲವಂತದಿಂದ ರಾಷ್ಟ್ರೀಯವಾದವನ್ನು ಹೇರುವುದು ಜನರಲ್ಲಿ ಒಗ್ಗಟ್ಟಿನ ಬದಲು ಒಡಕನ್ನುಂಟು ಮಾಡಬಲ್ಲದು.
‘‘ರಾಷ್ಟ್ರೀಯವಾದವು ಎಲ್ಲಾ ಸಮುದಾಯಗಳನ್ನು ಒಳಪಡಿಸಿಕೊಂಡಿರಬೇಕು ಹಾಗೂ ಅದು ಜಾತ್ಯತೀತವಾಗಿರಬೇಕು. ಧರ್ಮ, ಭಾಷೆಯಂತಹ ಗುರುತುಗಳಿಂದ ಅದನ್ನು ನಿರ್ಧರಿಸಲು ಸಾಧ್ಯವಿಲ್ಲ. ಸರಕಾರದ ಒತ್ತಡವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯು ನಿರ್ಭೀತವಾಗಿ ಯೋಚಿಸಲು ಹಾಗೂ ಚಿಂತಿಸಲು ಅವಕಾಶವಿರುವ ಸಮಾನತಾವಾದಿ ಸಮಾಜವನ್ನು ನಾವು ಸೃಷ್ಟಿಸಬೇಕಾಗಿದೆ’’ ಎಂಬ ಖ್ಯಾತ ಇತಿಹಾಸ ತಜ್ಞೆ ರೋಮಿಲಾ ಥಾಪರ್ ಅವರ ಅನಿಸಿಕೆಯು ಅತ್ಯಂತ ಸಮಂಜಸವಾಗಿದೆ.