ವಾರಣಾಸಿ ಜೈಲಲ್ಲಿ ಹಿಂಸಾಚಾರ
ಕೈದಿಗಳಿಂದ ಅಧಿಕಾರಿಗಳ ಮೇಲೆ ದಾಳಿ
ಲಕ್ನೊ, ಎ.2: ವಾರಣಾಸಿಯ ಕಾರಾಗೃಹವೊಂದರಲ್ಲಿ ನಡೆದ ದಂಗೆಯಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ. ಕೈದಿಗಳು ಶನಿವಾರ ಕಾರಾಗೃಹದ ಕಾವಲುಗಾರರ ಮೇಲೆ ದಾಳಿ ನಡೆಸಿ, ಇಬ್ಬರು ಹಿರಿಯ ಬಂದಿಖಾನೆ ಅಧಿಕಾರಿಗಳನ್ನು ಒತ್ತೆ ಸೆರೆಯಿರಿಸಿಕೊಂಡರೆಂದು ಪೊಲೀಸರು ತಿಳಿಸಿದ್ದಾರೆ.
ಬಂದಿಖಾನೆಯ ಅಧಿಕ್ಷಕ ಆಶಿಷ್ ತಿವಾರಿ ಹಾಗೂ ಮತ್ತೊಬ್ಬರು ಹಿರಿಯ ಅಧಿಕಾರಿ ವಿಜಯಕುಮಾರ್ ರಾಯ್ ಎಂಬವರನ್ನು ಕೈದಿಗಳು ಒತ್ತೆ ಸೆರೆಯಲ್ಲಿರಿಸಿದರು. ಸಹಾಯಕ ಕಾರಾಗೃಹ ಅಧಿಕಾರಿ ಆಶಿಷ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಂದಿಖಾನೆಯ ಒಬ್ಬ ಕಾವಲುಗಾರ ಹಾಗೂ ನಾಗ ಯಾದವ್ ಎಂಬ ಕೈದಿಯ ನಡುವೆ ಜಟಾಪಟಿಯೊಂದು ನಡೆದ ಬಳಿಕ ಈ ಘಟನೆ ಸಂಭವಿಸಿದೆ. ಕೂಡಲೇ ಕಾವಲುಗಾರರ ವಿರುದ್ಧ ಕೈದಿಗಳು ಒಂದುಗೂಡಿದರು ಹಾಗೂ ದಾಳಿ ನಡೆಸಿದರು.
ಕೈದಿಗಳು ದಾಂಧಲೆ ಮುಂದುವರಿಸಿದಾಗ ಬಂದಿ ಖಾನೆಯ ಅಧಿಕಾರಿಗಳು, ಅವರು ಬ್ಯಾರಕ್‌ಗಳನ್ನು ಮುರಿಯುವುದನ್ನು ತಡೆಯಲು ಗಾಳಿಯಲ್ಲಿ ಗುಂಡು ಹಾರಿಸಿದರು. ಹಲವು ಸುತ್ತು ಗುಂಡು ಹಾರಿಸಿದರೂ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.
ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ನಗರ) ಪೊಲೀಸ್ ಅಧೀಕ್ಷಕ(ನಗರ) ಹಾಗೂ ಹಲವು ಠಾಣೆಗಳ ಪೊಲೀಸರು ಹಿಂಸಾಚಾರಗ್ರಸ್ತ ಬಂದಿಖಾನೆಯ ಆವರಣದಲ್ಲಿ ಬೀಡುಬಿಟ್ಟಿದ್ದಾರೆ.





