ಕೋಲ್ಕತಾ ಮೇಲ್ಸೇತುವೆ ದುರಂತಕ್ಕೆ ಕಾರಣವಾದ ಕಂಪೆನಿಗೆ ರಾಜ್ಯದಲ್ಲಿ 12 ಯೋಜನೆಗಳ ಗುತ್ತಿಗೆ!

ಬೆಂಗಳೂರು, ಎ.2: ಕೋಲ್ಕತಾದಲ್ಲಿ ಗುರುವಾರ 24 ಮಂದಿಯನ್ನು ಬಲಿ ತೆಗೆದುಕೊಂಡ ಮೇಲ್ಸೇತುವೆ ಕುಸಿತದ ಬಳಿಕ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ನಿರ್ಮಾಣ ಸಂಸ್ಥೆ ಇರಗವರಪು ವೆಂಕಟರೆಡ್ಡಿ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್(ಐವಿಆರ್‌ಸಿಎಲ್) ಬೆಂಗಳೂರಿನಲ್ಲಿ 6 ಮೆಟ್ರೊ ನಿಲ್ದಾಣಗಳ ಸಹಿತ 12 ಯೋಜನೆಗಳನ್ನು ಕರ್ನಾಟಕದಲ್ಲಿ ಕೈಗೆತ್ತಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕೋಲ್ಕತಾದ ದುರಂತದಿಂದಾಗಿ, ‘ಸುರಕ್ಷಿತ ಹಾಗೂ ತಾಳಿಕೆಯ ವಿಶ್ವವನ್ನು ಕಟ್ಟಲು ಬದ್ಧ’ ಎಂಬ ಐವಿಆರ್‌ಸಿಎಲ್‌ನ ಪ್ರತಿಪಾದನೆಗೆ ಕರಿಮೋಡ ಮುಸುಕಿದಂತಾಗಿದೆ. ಆದಾಗ್ಯೂ, ಕಂಪೆನಿಗೆ ಕಳಂಕ ಬರುವಂತಹ ಯಾವ ಘಟನೆಯೂ ಕರ್ನಾಟಕದಲ್ಲಿ ಈವರೆಗೆ ನಡೆದಿಲ್ಲ.
ಅದು ಹಲಸೂರು, ಸಿಎಂಎಚ್ ರೋಡ್, ಓಲ್ಡ್ ಮದ್ರಾಸ್ ರೋಡ್, ಬೈಯಪ್ಪನ ಹಳ್ಳಿ, ಆರ್.ವಿ. ರೋಡ್ ಹಾಗೂ ಜಯನಗರ ಮೆಟ್ರೊ ನಿಲ್ದಾಣಗಳನ್ನು ನಿರ್ಮಿಸಿದೆ. ಇವುಗಳಲ್ಲಿ ಮೊದಲ ನಾಲ್ಕು ನಿಲ್ದಾಣಗಳು ಕಾರ್ಯಾಚರಣೆ ಆರಂಭಿಸಿದ್ದರೆ, ಕೊನೆಯ ಎರಡು ಉದ್ಘಾಟನೆಗಾಗಿ ಕಾಯುತ್ತಿವೆ.
ಐವಿಆರ್‌ಸಿಎಲ್, ಕರ್ನಾಟಕದಲ್ಲಿ ಮೆಟ್ರೊ ಯೋಜನೆಗಳನ್ನು ಮಾತ್ರವಲ್ಲದೆ, ನೀರು ಪೂರೈಕೆ, ನೀರಾವರಿ ಹಾಗೂ ಒಂದು ವಿದ್ಯುತ್ ಯೋಜನೆಯ ಕೆಲಸಗಳನ್ನೂ ಕೈಗೆತ್ತಿಕೊಂಡಿದೆ. ಇವುಗಳಲ್ಲಿ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಯ(ಬಿಡಬ್ಲುಎಸ್‌ಎಸ್‌ಬಿ) ಜೈಐಸಿಎ ನಿಧಿಯ ಯೋಜನೆ-2ರಡಿಯಲ್ಲಿ, ಫೋರ್ಬ್ಸ್ ಸಮತೋಲನ ಜಲಾಶಯದಿಂದ ಟಿ.ಕೆ. ಹಳ್ಳಿಗೆ ಕಚ್ಚಾ ನೀರು ಪೂರೈಕೆ ವ್ಯವಸ್ಥೆ, ಕರ್ನಾಟಕ ನಗರ ನೀರು ಪೂರೈಕೆ ಹಾಗೂ ಒಳಚರಂಡಿ ಮಂಡಳಿಯ ಸಣ್ಣ ಹಾಗೂ ಮಧ್ಯಮ ಪಟ್ಟಣಗಳಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ವಯ ಸಣ್ಣ ಹಾಗೂ ಮಧ್ಯಮ ಪಟ್ಟಣಗಳಲ್ಲಿ ನಗರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯನ್ವಯ ಆಲಮಟ್ಟಿ ಅಣೆಕಟ್ಟಿನಿಂದ ಹುನಗುಂದ, ಇಳಕಲ್, ಕುಷ್ಟಗಿ ಪಟ್ಟಣಗಳಿಗೆ ಮತ್ತು ಮಾರ್ಗದಲ್ಲಿ ಬರುವ ಗ್ರಾಮಗಳಿಗೆ ನೀರು ಸರಬರಾಜು ಯೋಜನೆಗಳು ಸೇರಿವೆ.
ಅಲ್ಲದೆ, ಕಾವೇರಿ ನೀರಾವರಿ ನಿಗಮಕ್ಕಾಗಿ ಅಲಂಬೂರು ಗ್ರಾಮದ ಸಮೀಪ ಕಬಿನಿ ನದಿಯಿಂದ ನೀರನ್ನೆತ್ತಿ, ನಂಜನಗೂಡು, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕುಗಳಲ್ಲಿ ಕುಡಿಯುವ ನೀರಿಗಾಗಿ 20 ಟ್ಯಾಂಕ್‌ಗಳನ್ನು ತುಂಬುವ ಯೋಜನೆಯನ್ನೂ ಸಂಸ್ಥೆ ವಹಿಸಿಕೊಂಡಿತ್ತು.
ಅದು, ಕರ್ನಾಟಕ ನೀರಾವರಿ ನಿಗಮಕ್ಕಾಗಿ ಎತ್ತಿನ ಹೊಳೆ ಹಾಗೂ ಭದ್ರಾ ಆಧುನಿಕೀಕರಣ ಯೋಜನೆಗಳ ಗುತ್ತಿಗೆಯನ್ನೂ ಪಡೆದಿದೆ. ನಿರ್ಮಾಣ ಸಂಸ್ಥೆಯು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ಲಿಮಿಟೆಡ್‌ಗಾಗಿ, ಕೊಡಗಿ ಸೂಪರ್ ಥರ್ಮಲ್ ಪವರ್ ಸ್ಟೇಶನ್ ಸ್ಟೇಜ್-1ರ ನಿವೇಶನದ ಹೊರಗಿನ ಸಿವಿಲ್ ಕಾಮಗಾರಿ ಪ್ಯಾಕೇಜ್‌ನ ಕೆಲಸಗಳನ್ನು ಮಾಡುತ್ತಿದೆ.
ಐವಿಆರ್‌ಸಿಎಲ್, ಸುಮಾರು 7 ವರ್ಷಗಳ ಹಿಂದೆ ಬಿಬಿಎಂಪಿಯ ಕೆಲವು ಯೋಜನೆಗಳಿಗೂ ಬಿಡ್ ಹಾಕಿತ್ತು. ಆದರೆ, ಪಾಲಿಕೆಯಲ್ಲಿ ನಡೆದಿದ್ದ ಕುಖ್ಯಾತ ‘ಮಧ್ಯ ರಾತ್ರಿಯ ಟೆಂಡರ್’ ಹಗರಣ, ಇಡೀ ಟೆಂಟರ್ ಪ್ರಕ್ರಿಯೆಯ ಮೇಲೆಯೇ ಕರಿ ನೆರಳನ್ನು ಬೀರಿತ್ತು. ಅದರಿಂದಾಗಿ, ಅದಕ್ಕೆ ಯಾವುದೇ ಗುತ್ತಿಗೆ ದೊರೆತಿರಲಿಲ್ಲವೆಂದು ಪಾಲಿಕೆಯ ಮುಖ್ಯ ಇಂಜಿನಿಯರ್ ಒಬ್ಬರು ತಿಳಿಸಿದ್ದಾರೆ.







