ಜೀವನದ ಶಿಸ್ತು ಉದ್ಯಮದ ಯಶಸ್ಸಿನ ಗುಟ್ಟು: ಪ್ರವೀಣ್ ಕಡ್ಲೆ

ಮಂಗಳೂರು, ಎ.2: ಜೀವನದ ಶಿಸ್ತು ಉದ್ಯಮದ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದು, ಶಿಸ್ತಿನ ಜೊತೆ ಸ್ಪಷ್ಟ ಗುರಿ ಅತ್ಯುತ್ತಮ ಸ್ಥಾನಕ್ಕೇರಲು ಸಹಕಾರಿ ಯಾಗುತ್ತದೆ ಎಂದು ಟಾಟಾ ಕ್ಯಾಪಿಟಲ್ ಗ್ರೂಪ್ ಆಫ್ ಕಂಪೆನೀಸ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಪಿ. ಕಡ್ಲೆ ಅಭಿಪ್ರಾಯಿಸಿದ್ದಾರೆ.
ಅವರು ಇಂದು ಬೋಂದೆಲ್‌ನ ಬೆಸೆಂಟ್ ವ್ಯವಹಾರಾಡಳಿತ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಡೆಪ್ಯುಟಿ ಗವರ್ನರ್ ಜೊತೆಗಿನ ಸಂವಾದ ಕಾರ್ಯ ಕ್ರಮದಲ್ಲಿ ಉದ್ಯಮದಲ್ಲಿನ ತಮ್ಮ ಅನುಭವ ಹಾಗೂ ತಮ್ಮ ಜೀವನದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ತನ್ನ ಕುಟುಂಬ, ಬಾಲ್ಯ ಜೀವನ, ಶಾಲಾ ಕಾಲೇಜು ಜೀವನ ಹಾಗೂ ವೃತ್ತಿ ಜೀವನದ ಬಗ್ಗೆ ವಿವರ ನೀಡಿದ ಅವರು, ಅಗರ್‌ವಾಲ್ ಕಂಪೆನಿ ಹಾಗೂ ಟಾಟಾ ಸಂಸ್ಥೆಯಲ್ಲಿನ ವೃತ್ತಿ ಜೀವನ ತನ್ನಲ್ಲಿ ಉದ್ಯಮದ ಬಗ್ಗೆ ಸಾಕಷ್ಟು ಚೈತನ್ಯವನ್ನು ತುಂಬಿದೆ ಎಂದರು. ಕ್ರೀಡೆ, ವ್ಯವಹಾರ, ಕೈಗಾರಿಕೆ, ರಾಜಕೀಯ ಮುತ್ಸದ್ಧಿಗಳು ಹಾಗೂ ಚಿಂತಕರ ಜೀವನ ಚರಿತ್ರೆಯ ಪುಸ್ತಕಗಳನ್ನು ತಾನು ಹೆಚ್ಚಾಗಿ ಓದುತ್ತೇನೆ ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಟಾಟಾ ಸಂಸ್ಥೆಯು ಗಣ್ಯ ವ್ಯಕ್ತಿಗಳ ಜತೆಗಿನ ಒಡನಾಟಕ್ಕೆ ತನಗೆ ನೆರವು ನೀಡಿದೆ. ಸಂಸ್ಥೆಯ ಮುಖ್ಯಸ್ಥರ ಆತ್ಮೀಯ ಸಂಪರ್ಕ ಹಾಗೂ ಒಡನಾಟ ತನ್ನ ಉದ್ಯಮ ಕ್ಷಮತೆ ಹಾಗೂ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿದೆ ಎಂದು ಅವರು ಟಾಟಾ ಸಂಸ್ಥೆಯಲ್ಲಿನ ತಮ್ಮ ಅನುಭವವನ್ನು ಈ ಸಂದರ್ಭ ಹಂಚಿಕೊಂಡರು.
ಓರ್ವ ಉದ್ಯಮಿ, ಸಾಮಾಜಿಕ ವ್ಯಕ್ತಿಯಾಗಿ ಜತೆಗೆ ಓರ್ವ ಕುಟುಂಬಸ್ಥನಾಗಿ ಸಮಯ ನಿರ್ವಹಣೆ ಹೇಗೆ ಮಾಡುತ್ತೀರೆಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು, ಇದೊಂದು ಕಠಿಣ ಸವಾಲು. ಆದರೆ, ನೂತನ ತಂತ್ರಜ್ಞಾನ ಸಮಯ ನಿರ್ವಹಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಅಧ್ಯಾತ್ಮದ ಬಗೆಗಿನ ಪ್ರಶ್ನೆಗೆ, ಅಧ್ಯಾತ್ಮವೆಂಬುದು ಒಂದು ನಂಬಿಕೆ. ನಾವು ಸಂಕಷ್ಟದಲ್ಲಿರುವಾಗ ನಂಬಿಕೆಗಳ ಮೊರೆ ಹೋಗುತ್ತೇವೆ. ಅದು ಅಗೋಚರ ಶಕ್ತಿಯಾಗಿರಬಹುದು ಅಥವಾ ದೇವರೆಂಬ ನಂಬಿಕೆಯೇ ಆಗಿರಬಹುದು. ಈ ನಂಬಿಕೆ ಕೆಲವೊಮ್ಮೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಮಾರ್ಗವಾಗಿ ಬಿಡುತ್ತದೆ. ಇದು ಅವರವರ ನಂಬಿಕೆಯ ಪ್ರಶ್ನೆ ಎಂದ ವರು ಪ್ರತಿಕ್ರಿಯಿಸಿದರು.
ಬೆಸೆಂಟ್ ಸಂಸ್ಥೆಗಳ ಮುಖ್ಯಸ್ಥರಾದ ಕುಡ್ಪಿಜಗದೀಶ್ ಶೆಣೈ, ಮಣೇಲ್ ಅಣ್ಣಪ್ಪನಾಯಕ್, ಶ್ಯಾಮ ಸುಂದರ ಕಾಮತ್ ಉಪಸ್ಥಿತರಿದ್ದರು.







