'ಎಸಿಬಿ': ಸಿಎಂ ವಿರುದ್ಧವೇ ಮೊದಲ ದೂರು

ಬೆಂಗಳೂರು, ಎ. 2: ಲೋಕಾಯುಕ್ತ ಬೇಕಾ, ಎಸಿಬಿ ಬೇಕಾ ಎನ್ನುವ ಗೊಂದಲದ ಮಧ್ಯೆಯೇ ಮೊದಲ ಬಾರಿಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದುಬಾರಿ ವಾಚ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ.
ಬೆಂಗಳೂರಿನ ಖನಿಜ ಭವನದಲ್ಲಿರುವ ಎಸಿಬಿ ಕಚೇರಿಗೆ ವಕೀಲ ಅಮೃತೇಶ್ ಎಂಬುವರು ಸಿಎಂ ಸಿದ್ದರಾಮಯ್ಯ ವಿರುದ್ಧದ ದುಬಾರಿ ವಾಚ್ ಪ್ರಕರಣದ ಕುರಿತಂತೆ ಲಿಖಿತ ದೂರು ನೀಡಿದ್ದಾರೆ.
ದುಬಾರಿ ವಾಚ್ ಬಗ್ಗೆ ಸಾಕಷ್ಟು ಸಂದೇಹಗಳಿವೆ, ಸಿಎಂ ಅದು ತಮಗೆ ಉಡುಗೊರೆಯಾಗಿ ಬಂದಿದ್ದು ಎಂದಿದ್ದಾರೆ. ಅಲ್ಲದೆ, ತಮ್ಮ ಆಪ್ತ ಸ್ನೇಹಿತ ಗಿರೀಶ್ ಚಂದ್ರ ವರ್ಮ ಎಂಬುವರು ಉಡುಗೊರೆ ಕೊಟ್ಟರು ಎಂದು ಹೇಳಲಾಗುತ್ತಿದೆ.
ಆದರೆ, ಆ ವ್ಯಕ್ತಿ ಎಲ್ಲಿದ್ದಾರೆಂದೇ ಗೊತ್ತಿಲ್ಲ. ಇದುವರೆಗೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ವಾಚ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ. ಹೀಗಾಗಿ, ಸತ್ಯ ತಿಳಿಯುವ ಹಿನ್ನೆಲೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದರು.
ವಾಚ್‌ನ್ನು ಸರಕಾರಿ ಆಸ್ತಿ ಎಂದು ಘೋಷಿಸಿದರಷ್ಟೇ ಸಾಲದು, ಅದು ಯಾರಿಂದ ಯಾವ ಕಾರಣಕ್ಕೆ ಬಂತು ಎಂಬುದೂ ತಿಳಿಯಬೇಕು ಎಂದು ಎಸಿಬಿಗೆ ನೀಡಿರುವ ದೂರಿನಲ್ಲಿ ವಕೀಲ ಅಮೃತೇಶ್ ಮನವಿ ಮಾಡಿದ್ದಾರೆ.







