ಖಾಸಗಿ ಶಾಲಾ ವಿದ್ಯಾರ್ಥಿಗಳಿಗೂ ‘ಶೂಭಾಗ್ಯ’: ಸಚಿವ ರೈ

ವಿಟ್ಲ, ಎ.2: ರಾಜ್ಯ ಸರಕಾರದ ಶೂಭಾಗ್ಯ ಯೋಜನೆಯನ್ನು ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೂ ವಿಸ್ತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ತಾಲೂಕಿನ ಸಜಿಪಮೂಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿಯಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆ, ಪದವಿಪೂರ್ವ ಶಿಕ್ಷಣ ಇಲಾಖಾ ಅನುದಾನ ದಿಂದ 50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ, ನಬಾರ್ಡ್ ಯೋಜನೆಯಡಿ 54 ಲಕ್ಷ ರೂ. ಅನುದಾನದ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಸರಕಾರದ ಶೂಭಾಗ್ಯ ಯೋಜನೆಯಡಿ ವಿದ್ಯಾರ್ಥಿಗಳಿಗೆ ಶೂ ವಿತರಿಸಿ ಮಾತನಾಡಿದರು.
ಸರ್ವಶಿಕ್ಷಾ ಅಭಿಯಾನದಡಿ ಶಾಲೆಗಳ ಪ್ರಗತಿ ಉತ್ತಮ ರೀತಿಯಲ್ಲಿ ನಡೆಸಲಾಗಿದೆ. ತಾಲೂಕಿ ನಲ್ಲಿ ‘ಮರಳಿ ಬಾ ಶಾಲೆಗೆ’ ಕಾರ್ಯ ಕ್ರಮವು ಯಶಸ್ವಿಯಾಗಿದೆ ಎಂದರು.
ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಸದಸ್ಯ ಸಂಜೀವ ಪೂಜಾರಿ, ಸಜಿಪಮೂಡ ಗ್ರಾಪಂ ಅಧ್ಯಕ್ಷ ಗಣಪತಿ ಭಟ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಪಂ ಸದಸ್ಯ ಮಮತಾ ಗಟ್ಟಿ, ತಾಪಂ ಸದಸ್ಯ ಬಿ.ಎಂ. ಅಬ್ಬಾಸ್ ಅಲಿ, ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಬಂಟ್ವಾಳ ತಾಲೂಕು ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಕಾಲೇಜು ಪ್ರಭಾರ ಪ್ರಾಂಶುಪಾಲೆ ಪ್ರಮೀಳಾ, ಲೋಕೋ ಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಇಂಜಿನಿಯರ್‌ಗಳಾದ ನೂತನ್, ಗೋಪಾಲ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ಹಾಗೂ ಸದಸ್ಯರು ವೇದಿಕೆಯಲ್ಲಿದ್ದರು. ಶಿಕ್ಷಕ ಅಮಾನುಲ್ಲಾ ಖಾನ್ ಸ್ವಾಗತಿಸಿದರು. ಬಿ. ಗಣೇಶ್ ಹಾಗೂ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಭಾರ ಉಪಪ್ರಾಂಶುಪಾಲೆ ಜಯಲಕ್ಷ್ಮೀ ಪಿ.ಎನ್. ಹಾಗೂ ಶಿಕ್ಷಕ ಶ್ರೀನಿವಾಸ್ ನಾಯಕ್ ವಂದಿಸಿದರು.







