ಕಾನೂನಿನ ಪರಿಮಿತಿಯಲ್ಲೇ ಕರ್ತವ್ಯ ನಿರ್ವಹಿಸಿ: ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್

ಉಡುಪಿ, ಎ.2: ಲೋಕಾಯುಕ್ತ, ್ರಷ್ಟಾಚಾರ ನಿಗ್ರಹ ದಳ, ಮಾನವ ಹಕ್ಕುಗಳ ಆಯೋಗ, ಪೊಲೀಸ್ ದೂರು ಪ್ರಾಧಿಕಾರಗಳ ಮಧ್ಯೆ ಬಹಳ ಎಚ್ಚರಿಕೆ ಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ. ಆದ್ದರಿಂದ ಕಾನೂನಿನ ಪರಿಮಿತಿಯಲ್ಲೇ ತಮ್ಮ ಕರ್ತವ್ಯ ನಿರ್ವಹಿಸಿ ಎಂದು ಉಡುಪಿ ಜಿಲ್ಲಾ ನಿವೃತ್ತ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಕಿವಿಮಾತು ಹೇಳಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವತಿ ಯಿಂದ ಶನಿವಾರ ಉಡುಪಿಯ ಚಂದು ಮೈದಾನದಲ್ಲಿ ಆಯೋಜಿಸಲಾದ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಈ ಎಲ್ಲ ಸಂಸ್ಥೆಗಳಿಗೆ ಹೊಂದಿಕೊಂಡು ಕೆಲಸ ಮಾಡಬೇಕಾದ ಪರಿಸ್ಥಿತಿ ಪೊಲೀಸರದ್ದಾಗಿದೆ. ಜನ ಇಂದು ತಮ್ಮ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳುವಲ್ಲಿ ಜಾಗೃತರಾಗಿದ್ದಾರೆ. ಹೀಗಾಗಿ ಪೊಲೀಸರು ತಮ್ಮ ಕರ್ತವ್ಯವನ್ನು ಕಾನೂನು ವ್ಯಾಪ್ತಿ ಯಲ್ಲಿಯೇ ಮಾಡಬೇಕಾಗಿದೆ ಎಂದರು.
ಬಡವರಿಗೆ, ದೀನ ದಲಿತರಿಗೆ ಸಹಾಯ ಮಾಡುವ ಅವಕಾಶ ಪೊಲೀಸ್ ಇಲಾಖೆಯಿಂದ ನಮಗೆ ದೊರೆತಿದ್ದು, ಅದನ್ನು ಸದುಪಯೋಗಪಡಿಸಿಕೊಂಡು ನ್ಯಾಯ ಕೇಳಿ ಬರುವ ಬಡವರಿಗೆ ಸಹಾನುಭೂತಿಯನ್ನು ತೋರಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ 62 ಮಂದಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಲ್ಯಾಣ ನಿಧಿಯನ್ನು ವಿತರಿಸಲಾಯಿತು. ಜಿಲ್ಲಾ ಎಸ್ಪಿ ಅಣ್ಣಾಮಲೈ ಸ್ವಾಗತಿಸಿದರು. ಉಡುಪಿ ಉಪವಿಭಾಗದ ಡಿವೈಎಸ್ಪಿ ಕುಮಾರಸ್ವಾಮಿ ಎಸ್.ಜೆ. ವಂದಿಸಿದರು. ಮನಮೋಹನ್ ರಾವ್ ಕಾರ್ಯ ಕ್ರಮ ನಿರೂಪಿಸಿದರು.







