ತಿಂಗಳಾಂತ್ಯಕ್ಕೆ ಸಚಿವ ಸಂಪುಟ ಪುನಾರಚನೆ: ಸಿದ್ದರಾಮಯ್ಯ

ಬೆಂಗಳೂರು, ಎ.2: ಸಚಿವ ಸಂಪುಟಕ್ಕೆ ಹೊಸಬರನ್ನು ಸೇರ್ಪಡೆ ಮಾಡಿಕೊಳ್ಳುವ ದೃಷ್ಟಿಯಿಂದ ಇಪ್ಪತ್ತೈದು ಮಂದಿ ಸಚಿವರನ್ನು ಕೈಬಿಡಬೇಕೆಂಬ ಆಗ್ರಹದ ಬೆನ್ನಲ್ಲೇ ಬಹು ನಿರೀಕ್ಷಿತ ಸಚಿವ ಸಂಪುಟ ಪುನಾರಚನೆ ಈ ತಿಂಗಳ ಅಂತ್ಯದಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ದೃಷ್ಟಿಯಿಂದ ಇಪ್ಪತ್ತೈದು ಮಂದಿ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸಬೇಕೆಂದು ಸಮಾನಮನಸ್ಕ ಶಾಸಕರು ಆಗ್ರಹಿಸಿದರು.
ಈ ಮಧ್ಯೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿರುವ ಪ್ರಭಾವಿ ಸಚಿವ ಸ್ಥಾನಗಳಲ್ಲಿರುವ ರಾಮಲಿಂಗಾರೆಡ್ಡಿ ಮತ್ತು ದಿನೇಶ್ ಗುಂಡೂರಾವ್, ಸಮಾನಮನಸ್ಕ ಶಾಸಕರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಅಶಿಸ್ತು ಪ್ರದರ್ಶಿಸಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದರು.
ಈ ನಡುವೆಯೇ ಸಿದ್ದರಾಮಯ್ಯ ಸಂಪುಟ ಪುನಾರಚನೆ ಮಾಡಲಾಗುವುದು ಎಂದು ಘೋಷಿಸಿರುವುದು ಆಕಾಂಕ್ಷಿಗಳಲ್ಲಿ ಉತ್ಸಹ ಮೂಡಿಸಿದೆ. ಅತ್ತ ಸಂಪುಟದಲ್ಲಿರುವ ಕೆಲ ‘ಅಸಮರ್ಥ’ರಿಗೆ ಆಘಾತವನ್ನೂ ತಂದಿದೆ. ಒಟ್ಟಾರೆ ಕಾಂಗ್ರೆಸ್ ವಲಯದಲ್ಲಿ ಚಟುವಟಿಕೆ ಬಿರುಸುಗೊಂಡಿದೆ.
ಈ ತಿಂಗಳ ಅಂತ್ಯಕ್ಕೆ ಸಂಪುಟ ಪುನಾರಚನೆ ಸಂಬಂಧ ತೀರ್ಮಾನ ಕೈಗೊಳ್ಳಲಿದ್ದು, ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ಸಂಬಂಧ ವರಿಷ್ಠರೊಂದಿಗೆ ಚರ್ಚಿಸಲು ಎ.10ಕ್ಕೆ ಹೊಸದಿಲ್ಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಆಗ್ರಹಿಸಿ 35ಕ್ಕೂ ಹೆಚ್ಚು ಮಂದಿ ಶಾಸಕರು ಎ.9ಕ್ಕೆ ಹೊಸದಿಲ್ಲಿಗೆ ತೆರಳುತ್ತಿದ್ದು, ಸಂಪುಟ ಸೇರ್ಪಡೆಗೆ ಒತ್ತಡ ಹೆಚ್ಚಿದೆ. ಈ ಮಧ್ಯೆಯೇ ಸ್ಥಾನ ಕೈತಪ್ಪುವ ಭೀತಿಯಲ್ಲಿರುವ ಸಚಿವರೂ ಸ್ಥಾನ ಉಳಿಸಿಕೊಳ್ಳಲು ಹೈಕಮಾಂಡ್ ಮಟ್ಟದಲ್ಲಿ ಲಾಬಿ ಆರಂಭಿಸಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ.







