ಸಂಶಯ, ಟೀಕೆಗಳಿಂದ ನೋವಾಗಿತ್ತು: ಸಮ್ಮಿ
ಕೋಲ್ಕತಾ, ಎ.2: ‘‘ವೆಸ್ಟ್‌ಇಂಡೀಸ್‌ನ ಟ್ವೆಂಟಿ-20 ತಂಡದ ವಿರುದ್ಧ ನಿರಂತರವಾಗಿ ಕೇಳಿಬರುತ್ತಿದ್ದ ಟೀಕೆ ಹಾಗೂ ಸಂಶಯಗಳಿಂದ ತುಂಬಾ ನೋವಾಗಿತ್ತು. ಮೈದಾನದ ಹೊರಗೂ ಸಮಸ್ಯೆಗಳು ಕಾಡುತ್ತಿದ್ದವು. ಇವೆಲ್ಲವನ್ನೂ ವೆುಟ್ಟಿ ನಿಂತ ನಮ್ಮ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಫೈನಲ್‌ಗೆ ತಲುಪಿದೆ’’ ಎಂದು ಡರೆನ್ ಸಮ್ಮಿ ಭಾವೋದ್ವೇಗದಿಂದ ಹೇಳಿದ್ದಾರೆ.
‘‘ವಿಶ್ವಕಪ್ ನಮಗೆ ಕಷ್ಟದ ಪ್ರಯಾಣವಾಗಿತ್ತು. ಟೂರ್ನಿಯ ಮೊದಲು ಸಾಕಷ್ಟು ಕಹಿ ಘಟನೆಗಳು ನಡೆದಿದ್ದವು. ಪ್ರತಿಯೊಂದು ಕಾರಣವಿರದೇ ನಡೆಯದು ಎಂಬುದು ನನ್ನ ಅನಿಸಿಕೆ. ಟೂರ್ನಿಯ ಮೊದಲು ನಡೆದ ಘಟನಾವಳಿಗಳು ನಮ್ಮನ್ನು ಒಗ್ಗಟ್ಟಾಗಿಸಿತು. 2009ರಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ನಮ್ಮ ತಂಡ 2012ರಲ್ಲಿ ಚಾಂಪಿಯನ್ ಆಗಿತ್ತು. ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ಅತ್ಯಂತ ಮುಖ್ಯ. ಆದರೆ,ಪ್ರತಿ ವರ್ಷ ನಮಗೆ ಅವಕಾಶ ಸಿಗಲಾರದು’’ಎಂದು ಸಮ್ಮಿ ಹೇಳಿದರು.
‘ವೆಸ್ಟ್‌ಇಂಡೀಸ್‌ಗೆ ಮೆದುಳಿಲ್ಲ’ ಎಂದು ಇಎಸ್‌ಪಿಎನ್ ಕ್ರಿಕ್ ಇನ್‌ಫೋಗೆ ನೀಡಿದ ಸಂದರ್ಶನದಲ್ಲಿ ಬ್ರಿಟನ್‌ನ ಖ್ಯಾತ ಟಿವಿ ನಿರೂಪಕ ಮಾರ್ಕ್ ನಿಕೊಲಸ್ ನೀಡಿದ್ದ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ಸಮ್ಮಿ, ‘‘ನಮಗೆ ಮೆದುಳಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ. ಪ್ರಾಣಿಗಳಿಗೂ ಮೆದುಳಿರುತ್ತದೆ. ಅವರ ಹೇಳಿಕೆಯು ನನಗೆ ನೋವುಂಟು ಮಾಡಿದೆ’’ ಎಂದು ಸಮ್ಮಿ ನುಡಿದರು.





