ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ವಿದ್ಯಾರ್ಥಿಗಳು, ಪೋಷಕರು ಭಾಗಿ?

ಬೆಂಗಳೂರು, ಎ.2: ದ್ವಿತೀಯ ಪಿಯುಸಿ ಕೆಮೆಸ್ಟ್ರಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು ಕೆಲ ವಿದ್ಯಾರ್ಥಿಗಳು, ಪೋಷಕರು ಹಾಗೂ ಏಜೆಂಟರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಿದ್ದಾರೆ. ಇಂದು ನಗರದ ಮಲ್ಲೇಶ್ವರಂನಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಗೆ ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಿ ನೂರಕ್ಕೂ ಹೆಚ್ಚು ಪೋಷಕರನ್ನು, ವಿದ್ಯಾರ್ಥಿ ಹಾಗೂ ಏಜೆಂಟ್‌ರನ್ನು ವಿಚಾರಣೆಗೆ ಒಳಪಡಿಸಿದರು.
ಇತ್ತೀಚಿಗೆ ಬೆಂಗಳೂರು ಹಾಗೂ ತುಮಕೂರಿನ ಎಂಟು ವಿದ್ಯಾರ್ಥಿಗಳು, ಇಬ್ಬರು ಪ್ರಾಂಶುಪಾಲರನ್ನು ವಶಕ್ಕೆ ಪಡೆದಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಸಿಐಡಿ ವಿಭಾಗದ ಡಿಐಜಿ ಸೋನಿಯಾ ನಾರಂಗ್, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹೆಚ್ಚಾಗಿ ಪಿಯು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಹಾಗೂ ಏಜೆಂಟರು ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದರು.
ಸೋರಿಕೆಯಾದ ಒಂದು ಪ್ರಶ್ನೆ ಪತ್ರಿಕೆ ಮೂರು ಸಾವಿರದಿಂದ ನಾಲ್ಕು ಸಾವಿರ ರೂ.ವರೆಗೆ ಮಾರಾಟವಾಗಿದೆ ಎಂಬ ಅಂಶ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ತನಿಖೆ ನಡೆಸಲು ಉನ್ನತ ಅಧಿಕಾರಿಗಳ ತಂಡ ರಚನೆಯಾಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಕೈಜೋಡಿಸಿರುವ ಜಾಲವನ್ನು ಶೀಘ್ರದಲ್ಲಿಯೇ ಪತ್ತೆ ಮಾಡಲಾಗುವುದೆಂದರು. ವಿಚಾರಣೆ ವೇಳೆ ವರ್ಗಾವಣೆಯಾಗಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪಲ್ಲವಿ ಆಕುರಾತಿ ಉಪಸ್ಥಿತರಿದ್ದರು.







