ಮನರಂಜನೆಯೊಂದಿಗೆ ಚಿಂತನೆಗೆ ಹಚ್ಚುವ ಕಿ ಆ್ಯಂಡ್ ಕ

ಗೃಹಿಣಿ, ಹೌಸ್‌ವೈಫ್, ಹೋಂಮೇಕರ್ ಎಂದು ಪತ್ನಿಯನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಹಾಗೆಯೇ ಪತಿ ‘ಹೌಸ್‌ಹಸ್‌ಬಾಂಡ್ ’ ಯಾಕೆ ಆಗಲು ಸಾಧ್ಯವಿಲ್ಲ. ಆದರೆ ಕನ್ನಡ, ಹಿಂದಿ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಅಂತಹ ಪದವೊಂದು ಇರುವುದು ಕಾಣುವುದಿಲ್ಲ. ಎಂಬಿಎ ಪದವಿಧರನೊಬ್ಬ ತನ್ನ ಪತ್ನಿಯನ್ನು ಉದ್ಯೋಗಕ್ಕೆ ಕಳುಹಿಸಿ, ತಾನು ಮನೆಯ ಕೆಲಸಗಳನ್ನು ನಿರ್ವಹಿಸಿದಾಗ, ಸಂಸಾರದಲ್ಲಿ ಹಾಗೂ ಸುತ್ತಮುತ್ತಲಿನ ಸಮಾಜದಲ್ಲಿ ಯಾವ ರೀತಿಯ ತುಮುಲಗಳು ಉಂಟಾಗುತ್ತವೆಯೆಂಬುದನ್ನು ನಿರ್ದೇಶಕ ಆರ್. ಬಾಲ್ಕಿ , ‘ಕಿ ಆ್ಯಂಡ್ ಕ ’ ಚಿತ್ರದಲ್ಲಿ ಕಾಮಿಡಿ ಟಚ್‌ನೊಂದಿಗೆ ತೋರಿಸಿದ್ದಾರೆ.
ಬದಲಾಗುತ್ತಿರುವ ಸಮಾಜದಲ್ಲಿ ಸ್ತ್ರೀ-ಪುರುಷರ ಮಧ್ಯದ ಸಂಬಂಧಗಳೂ ಬದಲಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹೀಗೆ ಸಂಸಾರದಲ್ಲಿ ಸಾಮಾನ್ಯವಾದ ಪುರುಷನ ಪಾತ್ರವನ್ನು ಸ್ತ್ರೀ ಹಾಗೂ ಸ್ತ್ರೀಯ ಪಾತ್ರವನ್ನು ಪುರುಷನು ನಿಭಾಯಿಸಿದರೆ ಅದನ್ನು ಸಮಾಜ ಯಾವ ರೀತಿ ಸ್ವೀಕರಿಸುತ್ತದೆಯೆಂಬುದನ್ನು ನಿರ್ದೇಶಕರು ರಸವತ್ತಾಗಿ ಬೆಳ್ಳಿತೆರೆಯ ಮುಂದಿಟ್ಟಿದ್ದಾರೆ. ದಿಲ್ಲಿ ಮೂಲದ ಕಬೀರ್ ಬನ್ಸಾಲ್ (ಅರ್ಜುನ್ ಕಪೂರ್), ತನ್ನ ತಂದೆಯ ಬಹುಕೋಟಿ ಉದ್ಯಮ ಸಮೂಹಕ್ಕೆ ಉತ್ತರಾಧಿಕಾರಿಯಾಗಲಿರುತ್ತಾನೆ. ಆದರೆ ಕಬೀರ್‌ಗೆ ತನ್ನ ತಾಯಿಯಂತೆ ಆಗುವ ಆಸೆ. ಯಾಕೆಂದರೆ ಆತ ಗೃಹಿಣಿಯ ಕೆಲಸವೆಂದರೆ ಕಲಾವಿದನ ಕೆಲಸದಷ್ಟೇ ಚಾಕಚಕ್ಯತೆ ಹಾಗೂ ನಾಜೂಕಿನಿಂದ ಕೂಡಿದ್ದು ಎಂದು ಭಾವಿಸಿರುತ್ತಾನೆ. ಒಮ್ಮೆ ಆತ ಕಾರ್ಪೊರೇಟ್ ಜಗತ್ತಿನ ಉದಯೋನ್ಮುಖ ತಾರೆ ಕಿಯಾ (ಕರೀನಾ ಕಪೂರ್)ಳನ್ನು ವಿಮಾನ ಪ್ರಯಾಣದ ವೇಳೆ ಭೇಟಿಯಾಗುತ್ತಾನೆ. ಮೊದಲ ನೋಟಕ್ಕೆ ಕಿಯಾಳನ್ನು ಪ್ರೇಮಿಸತೊಡಗಿದ ಕಬೀರ್, ಆಕೆಯನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಾನೆ.ಆದರೆ ಅದು ಅಷ್ಟೊಂದು ಸುಲಭವಾದುದಾಗಿರಲಿಲ್ಲ. ಯಾಕೆಂದರೆ ಕಿಯಾ ಅಸಾಧಾರಣವಾದಂತಹ ಮಹತ್ತ್ವಾಕಾಂಕ್ಷೆಯುಳ್ಳ ಯುವತಿ. ಕಾರ್ಪೊರೇಟ್ ಜಗತ್ತಿನಲ್ಲಿ ಅತ್ಯುನ್ನತ ಸ್ಥಾನಕ್ಕೆ ತಲುಪುವ ತನ್ನ ಆಕಾಂಕ್ಷೆಗೆ ಮದುವೆಯು ಅಡ್ಡಬರುವುದು ಆಕೆಗೆ ಇಷ್ಟವಿರುವುದಿಲ್ಲ.
ಕಬೀರ್‌ನ ತಂದೆ ಬನ್ಸಾಲ್ (ರಜತ್ ಕಪೂರ್)ಗೆ ತನ್ನ ಪುತ್ರ, ಮಹತ್ವಾಕಾಂಕ್ಷಿ ಮಹಿಳೆಯನ್ನು ಮದುವೆಯಾಗುವುದನ್ನು ವಿರೋಧಿಸುತ್ತಾನೆ. ಈ ಮೊದಲೇ ತಂದೆ, ಮಗನ ಸಂಬಂಧವೂ ಹಳಸಿರುತ್ತದೆ. ಕಬೀರ್‌ನ ತಾಯಿ ಜೀವಂತವಿದ್ದಾಗ, ತಂದೆ ಬನ್ಸಾಲ್ ಆಕೆಯನ್ನು ನಡೆಸಿಕೊಂಡ ರೀತಿ ಇವರಿಬ್ಬರ ನಡುವಿನ ವಿರಸಕ್ಕೆ ಮೂಲ ಕಾರಣವಾಗಿರುತ್ತದೆ. ಕಿಯಾಳಿಗೆ ತಾನು ಕೇವಲ ಪತಿಯ ನೆರಳಿನಂತಿರುವುದು ಬೇಕಿರುವುದಿಲ್ಲ. ಇತ್ತ ಕಬೀರ್‌ಗೆ ಕೂಡಾ ತನ್ನ ಬಹುಕೋಟ್ಯಾಧಿಪತಿ ತಂದೆಯ ಹಾದಿಯಲ್ಲಿ ನಡೆಯಲು ಮನಸ್ಸಿರುವುದಿಲ್ಲ. ಬದಲಿಗೆ ಆತ ಗೃಹಿಣಿಯಾದ ತನ್ನ ತಾಯಿಯಂತಿರಲು ಬಯಸುತ್ತಾನೆ. ಕಿಯಾಳ ತಾಯಿ (ಸ್ವರೂಪ್ ಸಂಪತ್) ತನ್ನ ಮಗಳು ವೃತ್ತಿ ಬದುಕಿಗೆ ಗಮನಹರಿಸುವುದನ್ನು ಬೆಂಬಲಿಸುತ್ತಾಳೆ. ಕೊನೆಗೂ ಕಿಯಾ ತನಗಿಂತ ಮೂರು ವರ್ಷ ಕಿರಿಯವನಾದ ಕಬೀರ್‌ನನ್ನು ಮದುವೆಯಾಗುತ್ತಾಳೆ.
ವಿವಾಹದ ಬಳಿಕ ಕಬೀರ್ ಮನೆಯನ್ನು ಸ್ವಚ್ಛವಾಗಿಡುವ, ಅಡುಗೆ ಮಾಡುವ ಹಾಗೂ ಪತ್ನಿಯ ಲಾಲನೆ ಪಾಲನೆ ಮಾಡತೊಡಗುತ್ತಾನೆ. ಇತ್ತ ಕಿಯಾ ಕಾರ್ಪೊರೇಟ್ ಕಂಪೆನಿಯ ಉನ್ನತಾಧಿಕಾರಿಯಾಗಿ ಸಂಪತ್ತು, ಅಂತಸ್ತು ಗಳಿಸುತ್ತಾಳೆ. ತನ್ನ ವೃತ್ತಿಯಲ್ಲಿ ಇನ್ನಷ್ಟು ಬೆಳೆಯಲು ಹಂಬಲಿಸುತ್ತಾಳೆ, ಒಮ್ಮಾಮ್ಮೆ ಪತಿಯೊಂದಿಗೂ ಸಿಡಿಮಿಡಿಗೊಳ್ಳುತ್ತಾಳೆ. ಕ್ರಮೇಣ ಈ ದಂಪತಿಯ ಪಾತ್ರಗಳ ಬದಲಾವಣೆಯಿಂದಾಗಿ ಸಮಾಜದ ಗಮನವು ಕಬೀರ್‌ನೆಡೆಗೆ ಸೆಳೆಯಲ್ಪಡುತ್ತದೆ. ಹಲವರು ಆತನನ್ನು ವಿಚಿತ್ರವಾಗಿ ನೋಡಿದರೆ ಇನ್ನು ಕೆಲವರು ಆತನನ್ನು ಅನುಕರಿಸಲು ಬಯಸುತ್ತಾರೆ. ಹೀಗೆ ಕಬೀರ್ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಾನೆ. ಕ್ರಮೇಣ ಆತ ವಾಣಿಜ್ಯ ಜಾಹೀರಾತುಗಳ ನಾಯಕನೂ ಆಗುತ್ತಾನೆ ಮತ್ತು ಮಹಿಳೆಯರ ವಿಚಾರ ಸಂಕಿರಣಗಳಲ್ಲೂ ಚರ್ಚೆಯ ಕೇಂದ್ರಬಿಂದುವಾಗುತ್ತಾನೆ. ಒಟ್ಟಿನಲ್ಲಿ ಆತ ಜನಪ್ರಿಯತೆಯಲ್ಲಿ ಪತ್ನಿಯನ್ನು ಮೀರಿಸುತ್ತಾನೆ. ತಾರಾದಂಪತಿಯಾದ ಜಯಾ ಬಚ್ಚನ್ ಹಾಗೂ ಅಮಿತಾಭ್ ಕೂಡಾ ಆತನ ಅಭಿಮಾನಿಗಳಾಗುತ್ತಾರೆ. ಹೀಗೆ ಸೆಲೆಬ್ರೆಟಿಯಾಗಿ ಹೊರಹೊಮ್ಮುವ ತನ್ನ ಪತಿಯನ್ನು ಕಂಡು ಕಿಯಾಳಲ್ಲಿ ಯಾವ ಬದಲಾವಣೆಗಳಾಗುತ್ತವೆ ಎಂಬುದನ್ನು ತಿಳಿಯಬೇಕಾದರೆ ಕಿ ಆ್ಯಂಡ್ ಕ ತಪ್ಪದೆ ನೋಡಿ...
ಮಹತ್ವಾಕಾಂಕ್ಷಿ ಪತ್ನಿಯಾಗಿ ಕರೀನಾ ಕಪೂರ್ ಅದ್ಭುತವಾಗಿ ನಟಿಸಿದ್ದಾರೆ. ಬಹಳ ಸಮಯದ ಬಳಿಕ ಈ ನಟಿಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಈ ಚಿತ್ರದಲ್ಲಿ ದೊರೆತಿದೆ. ಆಕೆಯ ಡೈಲಾಗ್ ಡೆಲಿವರಿ ಕೂಡಾ ಅತ್ಯಂತ ಸಹಜವಾಗಿ ಮೂಡಿಬಂದಿದ್ದು ಎಲ್ಲಿಯೂ ಕೃತಕವೆಂದೆನಿಸುವುದಿಲ್ಲ. ಯುವನಟ ಅರ್ಜುನ್ ಕಪೂರ್ ಲವಲವಿಕೆಯ ಅಭಿನಯ ನೀಡಿದ್ದಾರೆ. ಅತ್ಯಂತ ಸವಾಲಿನದ್ದಾದ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಅವರ ಪರಿಶ್ರಮ ಎದ್ದುಕಾಣುತ್ತದೆ. ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಅವರ ಅಭಿನಯದಲ್ಲಿ ಸಾಕಷ್ಟು ಸುಧಾರಣೆಯಾಗಿರುವುದು ಕಂಡುಬರುತ್ತದೆ.
ಸ್ವರೂಪ್ ಸಂಪತ್ ಹಾಗೂ ರಜತ್ ಕಪೂರ್ ಕೂಡಾ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. 126 ನಿಮಿಷಗಳ ಈ ಸಿನೆಮಾ, ಅಲ್ಲಲ್ಲಿ ತುಸು ಎಳೆದಾಡಿದಂತೆ ಭಾಸವಾದರೂ, ಪ್ರೇಕ್ಷಕರನ್ನು ನೋಡಿಸಿಕೊಂಡು ಹೋಗುವಲ್ಲಿ ಸಫಲವಾಗುತ್ತದೆ. ಚಿತ್ರದಲ್ಲಿ ರಿಯಲ್ ತಾರಾದಂಪತಿಯಾದ ಅಮಿತಾಭ್ ಹಾಗೂ ಜಯಾಬಚ್ಚನ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕಂಡಿದ್ದಾರೆ. ಈ ತಾರಾದಂಪತಿಯ ಸಂಭಾಷಣೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ. ಮಹಿಳೆಯರು ಮಹತ್ತ್ವಾಕಾಂಕ್ಷಿಗಳಾಗಕೂಡದು ಅಥವಾ ಪುರುಷರು ಮನೆಯಲ್ಲಿ ಅಡುಗೆ ಮಾಡಿಕೊಂಡಿರಲು ಸಾಧ್ಯವಿಲ್ಲ ಅಥವಾ ಮಹಿಳೆಯ ವೃತ್ತಿಬದುಕು ಹೆರಿಗೆಯ ಆನಂತರ ಮುಗಿಯುತ್ತೆ ಎಂಬಂತಹ ನಮ್ಮ ಸಮಾಜದಲ್ಲಿ ಅಳವಾಗಿ ಬೇರೂರಿರುವ ನಂಬಿಕೆಗಳನ್ನು ಬುಡಮೇಲುಗೊಳಿಸಲು ನಿರ್ದೇಶಕರು ಯತ್ನಿಸಿದ್ದಾರೆ. ವಿಭಿನ್ನವಾದ ಕಥಾವಸ್ತುವನ್ನು ಬಾಲಿವುಡ್‌ಗೆ ಪರಿಚಯಿಸಲು ನಿರ್ದೇಶಕ ಬಾಲ್ಕಿ ರಿಸ್ಕ್ ತೆಗೆದುಕೊಂಡಿರುವುದನ್ನು ಮೆಚ್ಚಲೇ ಬೇಕು.
ಆದರೆ ಚಿತ್ರದಲ್ಲಿ ಮೈನಸ್ ಪಾಯಿಂಟ್‌ಗಳು ಇಲ್ಲವೆಂದಲ್ಲ. ಅನೇಕ ಉಪಹಾರ ಹಾಗೂ ಕಾಫಿ ಸೇವನೆಯ ದೃಶ್ಯಗಳನ್ನು ವಿಪರೀತವಾಗಿ ತುರುಕಲಾಗಿದ್ದು, ಕಥೆಯ ಸ್ವಾರಸ್ಯಕ್ಕೆ ಭಂಗ ತರುತ್ತವೆ. ಚಿತ್ರದ ಸಂಗೀತ ತೀರಾ ದುರ್ಬಲವಾಗಿದೆ. ಒಂದೇ ಹಾಡನ್ನು ಬೇರೆ ಬೇರೆ ಸನ್ನಿವೇಶಗಳಲ್ಲಿ ಬಳಸಿರುವುದು ಬೋರೆನಿಸುತ್ತದೆ. ಒಟ್ಟಿನಲ್ಲಿ ಪಕ್ಕಾ ಮನರಂಜನೆಯನ್ನು ಅರಸಿ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ಖಂಡಿತವಾಗಿಯೂ ‘ಕಿ ಆ್ಯಂಡ್ ಕ ’ ನಿರಾಶೆ ಮಾಡಲಾರರು.







