ವ್ಯಾಪಾರಿಗಳಿಗೆ ಗುಂಡಿಟ್ಟು ಓಡಿದ ದುಷ್ಕರ್ಮಿಗಳನ್ನು ಥಳಿಸಿದ ಗ್ರಾಮೀಣರು
ಹೊಡೆತದ ತೀವ್ರತೆಗೆ ಒಬ್ಬನ ಸಾವು, ಇನ್ನೊಬ್ಬ ಆಸ್ಪತ್ರೆಗೆ

ಉತ್ತರ ಪ್ರದೇಶ, ಎಪ್ರಿಲ್.3: ಉತ್ತರ ಪ್ರದೇಶದ ಗಾಝಿಪುರ ಜಿಲ್ಲೆಯ ಸಮಾಮತ್‌ಪುರದ ಚಟ್ಟಿ ಎಂಬಲ್ಲಿ ಶುಕ್ರವಾರ ಸುಮಾರು ಹನ್ನೊಂದು ಗಂಟೆಯ ವೇಳೆಗೆ ಕಿರಾಣಿ ವ್ಯಾಪಾರಿ ಮನೀಷ್ ಜೈಸ್ವಾಲ್ ಮತ್ತು ಅವರ ಸಹೋದರ ವಿಶ್ವಜೀತ್ ರ ಮೇಲೆ ಗುಂಡು ಹಾರಿಸಿ ಓಡಿದ ಇಬ್ಬರು ದುಷ್ಕರ್ಮಿಗಳನ್ನು ಗ್ರಾಮೀಣರು ಹಿಡಿದು ಥಳಿಸಿದ ಘಟನೆ ವರದಿಯಾಗಿದೆ.
ಇವರಲ್ಲಿ ಒಬ್ಬ ಗ್ರಾಮೀಣರ ಹೊಡೆತಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನೊಬ್ಬ ಗಂಭೀರ ಗಾಯಗೊಂಡಿದ್ದಾನೆಂದು ವರದಿಗಳು ತಿಳಿಸಿವೆ. ಗಾಯಾಳು ಆರೋಪಿಯನ್ನು ಜಿಲ್ಲಾಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯಿಂದ ಉದ್ರಿಕ್ತ ಗ್ರಾಮ ನಿವಾಸಿಗಳು ಸಲಾವತ್‌ಪುರ ಸರ್ಕಲ್‌ನಲ್ಲಿ ಬಂದ್ ಏರ್ಪಡಿಸಿದ್ದರು. ಗ್ರಾಮಾಂತರ ಎಸ್ಪಿ ಭರವಸೆ ನೀಡಿದ ಬಳಿಕ ಬಂದ್ ತೆರವು ಗೊಳಿಸಿದರು.
ಉದ್ವಿಗ್ನ ಪರಿಸ್ಥಿತಿ ನೋಡಿ ಸ್ಥಳಕ್ಕೆ ನಗರ ಎಸ್ಪಿ, ಗ್ರಾಮಾಂತರ ಎಸ್ಪಿ, ಮುಹಮ್ಮದಾಬಾದ್‌ನ ಎಸ್‌ಡಿಎಂ ಮತ್ತು ನಾಲ್ಕು ಠಾಣೆಗಳಿಂದ ಪೊಲೀಸರು ಭದ್ರತೆಯ ಏರ್ಪಾಡು ನಡೆಸಿದ್ದರೆಂದು ವರದಿಯಾಗಿದೆ. ಹಳೆಯ ದ್ವೇಷವೇ ಈ ಅವಳಿ ಕೊಲೆಗಳಿಗೆ ಕಾರಣವೆಂದು ಪೊಲೀಸರು ತಿಳಿಸಿದ್ದು ಗಾಯಾಳು ಆರೋಪಿ ಗ್ರಾಮದ ಪ್ರಧಾನನ ಪ್ರತಿನಿಧಿ ಒಂದು ಲಕ್ಷದ ಸುಪಾರಿ ನೀಡಿದ್ದರಿಂದ ಕೊಲೆಗೆ ಯತ್ನಿಸಲಾಯಿತು ಎಂದು ತಿಳಿಸಿರುವುದಾಗಿ ವರದಿಯಾಗಿದೆ





