ಅಪಘಾತದಲ್ಲಿ ಸಾವು: ಚೆನ್ನೈ ವರ್ಲ್ಡ್ ನಂ.2
ಯಮಪುರಿಗೆ ನೇರ ದಾರಿ ತೋರಿಸುವ ಮದ್ರಾಸ್ ರಸ್ತೆಗಳು

ಸಾಂದರ್ಭಿಕ ಚಿತ್ರ
ನವದೆಹಲಿ: ಚೆನ್ನೈ, ಜೋಧಪುರ, ಇಂಧೋರ್, ದೆಹಲಿ.. ವಿಶ್ವದ 47 ಪ್ರಮುಖ ನಗರಗಳ ಪೈಕಿ ರಸ್ತೆ ಅಪಘಾತದಲ್ಲಿ ಅತಿ ಹೆಚ್ಚು ಮಂದಿ ಸಾವಿಗೀಡಾಗುವ ನಗರಗಳ ಪಟ್ಟಿಯಲ್ಲಿರುವ ಭಾರತದ ಮಹಾನಗರಗಳು.
ಯುಎನ್ ಹೆಬಿಟೇಟ್ ಹಾಗೂ ಡಬ್ಲ್ಯುಎಚ್ಓ ಬಿಡುಗಡೆ ಮಾಡಿದ ನಗರ ಆರೋಗ್ಯ ಕುರಿತ ಜಾಗತಿಕ ವರದಿಯಲ್ಲಿ ಈ ಆತಂಕಕಾರಿ ಅಂಶಗಳು ಬಹಿರಂಗವಾಗಿವೆ. ಪ್ರತಿ ಲಕ್ಷ ಜನಸಂಖ್ಯೆ ಪೈಕಿ ರಸ್ತೆ ಅಪಘಾತದಲ್ಲಿ ಸಾಯುವ ಜನರ ಪ್ರಮಾಣದಲ್ಲಿ ಚೆನ್ನೈಗೆ ವಿಶ್ವದಲ್ಲೇ ಎರಡನೇ ಸ್ಥಾನ. ಈ ಮಹಾನಗರದ ಪ್ರತಿ ಲಕ್ಷ ನಾಗರಿಕರ ಪೈಕಿ 26.2 ಮಂದಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬ್ರೆಜಿಲ್ನ ಸಿಯೇರಾ ರಾಜ್ಯದ ರಾಜಧಾನಿ ಫೋರ್ಟಲೆಜಾ ಅಗ್ರಸ್ಥಾನಿ. ಜೈಪುರಕ್ಕೆ ನಾಲ್ಕನೇ ಸ್ಥಾನ ಸಿಕ್ಕಿದ್ರೆ, ಇಂಧೋರ್ 16ನೇ ಸ್ಥಾನದಲ್ಲಿದೆ. ಕೊಲ್ಕತ್ತಾ, ದೆಹಲಿ ಹಾಗೂ ಬೆಂಗಳೂರು ಕ್ರಮವಾಗಿ 23ರಿಂದ 25ನೇ ಸ್ಥಾನದಲ್ಲಿವೆ. ಮುಂಬೈಗೆ 40ನೇ ಸ್ಥಾನ.
ಅದಾಗ್ಯೂ ಸಂಚಾರ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಇದನ್ನು ಕಡಿಮೆ ಮಾಡಲು ಸಾಧ್ಯವಿದೆ. ನಗರದಲ್ಲಿ ವೇಗದ ಮಿತಿ ಕಡಿಮೆ ಮಾಡುವುದು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಒತ್ತು ನೀಡಿದಲ್ಲಿ ಈ ಪ್ರಮಾಣ ಕಡಿಮೆ ಮಾಡಬಹುದು ಎಂದು ವರದಿ ಸಲಹೆ ಮಾಡಿದೆ. "ಇಂದಿನ ಚೆನ್ನೈ ನಾಳಿನ ಸ್ಟಾಕ್ಹೋಂ ಆಗಬಹುದು. ಸ್ವೀಡನ್ ರಾಜಧಾನಿಯಲ್ಲಿ ಪ್ರತಿ ಲಕ್ಷಕ್ಕೆ 0.7 ಮಂದಿ ಮಾತ್ರ ಅಪಘಾತದಲ್ಲಿ ಸಾಯುತ್ತಿದ್ದಾರೆ. ಈ ಪ್ರಮಾಣವನ್ನು ಶೂನ್ಯಕ್ಕೆ ತರುವುದು ಅಲ್ಲಿನ ಸರ್ಕಾರದ ಮಹತ್ವಾಕಾಂಕ್ಷೆ.
ರಸ್ತೆ ಅಪಘಾತಗಳಲ್ಲಿ ಸಾಯುವ ಶೇಕಡ 26ರಷ್ಟು ಮಂದಿ ಬೈಸಿಕಲ್ ಸವಾರರು ಅಥವಾ ಪಾದಚಾರಿಗಳು. ಕೆಲ ನಗರಗಳಲ್ಲಿ ಈ ಪ್ರಮಾಣ ಶೇಕಡ 75ರಷ್ಟಿದೆ. ಭಾರತದ ನಗರಗಳಲ್ಲಿ ಶೇಕಡ 44ರಷ್ಟು ಮಂದಿ ಸೈಕಲ್ ಸವಾರರು ಹಾಗೂ ಪಾದಚಾರಿಗಳು ಸಾಯುತ್ತಿದ್ದಾರೆ ಎಂದು ವರದಿ ವಿವರಿಸಿದೆ. ಮುಂಬೈನಲ್ಲಿ ಈ ಪ್ರಮಾಣ ಶೇಕಡ 60 ಆಗಿದೆ. ಅಪಘಾತದ ಗಾಯಗಳು ಸಾವಿಗೆ ಎಂಟನೇ ಅತಿದೊಡ್ಡ ಕಾರಣ ಎಂದ ವರದಿ ಹೇಳಿದೆ.







