ಕತರ್: ಮಾಲ್ ಆಫ್ ಕತರ್‌ನಲ್ಲಿ ಬೆಂಕಿ ಅವಘಡ

ದೋಹ, ಎಪ್ರಿಲ್.3: ನಿರ್ಮಾಣ ಹಂತದಲ್ಲಿರುವ ಮಾಲ್ ಆಫ್ ಕತರ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.ನಿನ್ನೆ ಸಂಜೆ3:30ಕ್ಕೆ ಮಾಲ್‌ನ ಮೇಲ್ಭಾಗದಲ್ಲಿ ಹೊಗೆಯೇಳುವುದುಕಾಣಿಸಿತ್ತು. ಸಿವಿಲ್ ಡಿಫೆನ್ಸ್ ವಿಭಾಗ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿತು ಎಂದು ವರದಿಯಾಗಿದೆ.
ಆಗಸ್ಟ್ 23ಕ್ಕೆ ಉದ್ಘಾಟನೆಗೊಳ್ಳಲಿರುವ ಮಾಲ್ ಆಫ್ ಕತರ್‌ನ ನಿರ್ಮಾಣದ ಕೆಲಸಗಳು ಶೀಘ್ರಗತಿಯಲ್ಲಿ ನಡೆಯುತ್ತಿದ್ದು ನಿನ್ನೆ ಮಧ್ಯಾಹ್ನ ಎರಡೂವರೆ ಗಂಟೆಗೆ ಮಾಲ್‌ನಲ್ಲಿ ಬೆಂಕಿಹಿಡಿಯಿತು ಎಂದು ಅರ್ಬಾಕಾನ್ ಟ್ರೇಡಿಂಗ್ ಆ್ಯಂಡ್ ಕಾಂಟ್ರೆಕ್ಟಿಂಗ್ ಪ್ರೋಜೆಕ್ಟ್ ಡೈರೆಕ್ಟರ್ ಮೌವಾಫಕ್ ಕರ್ಬಾತ್ ಸ್ಪಷ್ಟಪಡಿಸಿದ್ದಾರೆ. ಯಾರಿಗೂ ಗಾಯ ಅಥವಾ ಇತರ ಯಾವುದೆ ಅಪಾಯ ಸಂಭವಿಸಿಲ್ಲವೆಂದು ಅವರು ತಿಳಿಸಿದ್ದು ಘಟನಾ ಸ್ಥಳದಿಂದ ಸುಮಾರು 14,000 ಕಾರ್ಮಿಕರು ಮತ್ತು ನೌಕರರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮಾಲ್‌ನ ಮನ ರಂಜನಾ ಸಮುಚ್ಚಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತೆಂದು ನೌಕರರಲ್ಲಿ ಕೆಲವರು ತಿಳಿಸಿರುವುದಾಗಿ ಪ್ರಾದೇಶಿಕ ವೆಬ್‌ಪೋರ್ಟಲ್ ವರದಿಯಲ್ಲಿ ತಿಳಿಸಿದೆ.
ಶುಕ್ರವಾರ ಸಂಜೆ ವೇಳೆ ರಮದ ಸಿಗ್ನಲ್‌ನ ಸಮೀಪದ ಅಲ್‌ಮುಫ್ತ ರೆಸ್ಟೋರೆಂಟ್ ಸಮುಚ್ಚಯದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿತ್ತು. ಇಲ್ಲಿ ಭಾಗಶಃ ಸುಟ್ಟುಹೋದ ಕಾರವನ್ ರೆಸ್ಟೊರೆಂಟ್‌ನ್ನು ಮುಚ್ಚಲಾಗಿದೆ. ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸುತ್ತಿದ್ದವರನ್ನೂ ನೌಕರರನ್ನು ಪೊಲೀಸ್ ಮತ್ತು ಸಿವಿಲ್ ಡಿಫೆನ್ಸ್ ಸೇರಿ ಹೊರತಂದಿದ್ದು ಯಾರಿಗೂ ಅಪಾಯವಾಗಿರಲಿಲ್ಲ ಎಂದು ವರದಿಯಾಗಿದೆ.





