ಬರ ಪರಿಹಾರ ಕಾಮಗಾರಿ : ಲೋಪವಾದರೆ ಡಿಸಿಗಳೇ ಹೊಣೆ, ಸಿಎಂ ಎಚ್ಚರಿಕೆ

ಬೆಂಗಳೂರು,ಎ.3: ಬರ ಪರಿಹಾರ ಕಾಮಗಾರಿಗಳ ವಿಚಾರದಲ್ಲಿ ಯಾವುದೇ ಲೋಪವಾದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.
ತೀವ್ರ ಬರಗಾಲಕ್ಕೆ ತುತ್ತಾಗಿರುವ ಉತ್ತರ ಕರ್ನಾಟಕ ಭಾಗದ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಯವರು ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಬಾಗಲಕೋಟ, ಗದಗ, ಹಾವೇರಿ, ಬಳ್ಳಾರಿ, ಬೀದರ್, ಬೆಳಗಾವಿ, ಧಾರವಾಡ, ಕಲಬುರ್ಗಿ, ರಾಯಚೂರು, ವಿಜಯಪುರ, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಯವರು ಹೇಳಿದ್ದು :
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಲ್ಲಿ ಎರಡು ದಿನ ಅಂದರೆ 15 ದಿನಗಳಿಗೆ ಒಮ್ಮೆ ಬರ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಸ್ಥಳೀಯ ಶಾಸಕರನ್ನು ಭೇಟಿಯಾಗಿ ಸಮಾಲೋಚಿಸಬೇಕು. ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಬೇಕು. ಬರ ಪರಿಹಾರ ಕಾಮಗಾರಿ ವಿಚಾರದಲ್ಲಿ ಯಾವುದೇ ತೊಡಕು ಕಂಡು ಬಂದರೆ ಸಂಬಂಧಪಟ್ಟ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆ ನಿವಾರಿಸಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮೇವು ಬ್ಯಾಂಕ್, ಗೋಶಾಲೆಗಳಿಗೂ ಭೇಟಿ ಕೊಡಬೇಕು. ಮೇವು ದಾಸ್ತಾನು, ಜಾನುವಾರುಗಳ ಔಷಧ ಸಂಗ್ರಹಿಸಿರುವ ಕುರಿತು ಮಾಹಿತಿ ಪಡೆಯಬೇಕು. ಆಗಾಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
ಅದೇ ರೀತಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಬೇಕು. ತೀವ್ರ ಬರಗಾಲಕ್ಕೆ ತುತ್ತಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಾಮರ್ಶಿಸಬೇಕು.
ಜಲಾಶಯಗಳಲ್ಲಿ ಈಗ ಲಭ್ಯವಿರುವ ನೀರನ್ನು ಕುಡಿಯುವ ನೀರು ಪೂರೈಕೆಗೆ ಮಾತ್ರ ಬಳಸಿಕೊಳ್ಳಬೇಕು. ಬೇರೆ ಉದ್ದೇಶಕ್ಕೆ ನೀರು ಬಳಸಿಕೊಳ್ಳುವಂತಿಲ್ಲ. ಕುಡಿಯುವ ನೀರಿಗೆ ತೊಂದರೆ ಆಗದಂತೆ ವಿದ್ಯುತ್ ಸರಬರಾಜು ಮಾಡಲು ಇಂಧನ ಇಲಾಖೆ ಅಧಿಕಾರಿಗಳಿಗೂ ತಾಕೀತು ಮಾಡಲಾಗಿದೆ. ಹೊಸದಾಗಿ ಕೊರೆಯುವ ಕೊಳವೆ ಬಾವಿಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಒದಗಿಸುವಂತೆಯೂ ಸೂಚಿಸಲಾಗಿದೆ.
ಪ್ರಕೃತಿ ವಿಕೋಪ ಪರಿಹಾರ ಸಂಬಂಧ ರಚನೆಯಾಗಿರುವ ಸಂಪುಟ ಉಪ ಸಮಿತಿ ಬೀದರ್ ಅಥವಾ ಕಲಬುರ್ಗಿಯಲ್ಲಿ 10 ದಿನದಲ್ಲಿ ಸಭೆ ನಡೆಸಲಿದೆ.
12 ಜಿಲ್ಲೆಗಳ 270 ಗ್ರಾಮಗಳಲ್ಲಿ ಪಸ್ತುತ 667 ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸುವಂತೆ ಸೂಚಿಸಲಾಗಿದೆ. ಅಂತಹ ಹಳ್ಳಿಗಳಿಗೆ ಯಾವುದಾದರೂ ಮೂಲಕ ಮೂಲಕ ನೀರು ಒದಗಿಸಲು ಆದೇಶಿಸಿದೆ.
ಜಿಲ್ಲಾಧಿಕಾರಿಗಳು ಪ್ರತಿದಿನ ತಹಸೀಲ್ದಾರರು, ಇಒಗಳು, ಇಂಧನ, ಆರೋಗ್ಯ, ಪಶು ಸಂಗೋಪನೆ, ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಬೇಕು. ತೊಂದರೆ ನಿವಾರಿಸಬೇಕು. ಕೊಳವೆ ಬಾವಿ ಕೊರೆಯಿಸಲು ಭೂ ವಿಜ್ಞಾನಿಗಳ ಕೊರತೆ ಇದ್ದರೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಟಾಸ್ಕ್ ಫೋರ್ಸ್ ಗಳಿಗೆ ತಲಾ 50 ಲಕ್ಷ ರೂ. ಬಿಡುಗಡೆ ಮಾಡಿದೆ. ಎಲ್ಲ ಕ್ಷೇತ್ರಗಳಲ್ಲಿ ಕ್ರಿಯಾ ಯೋಜನೆ ಸಿದ್ಧವಾಗಿದೆ. ಆಗದಿದ್ದರೆ ತಕ್ಷಣ ಸಿದ್ಧಪಡಿಸುವಂತೆ ಸೂಚಿಸಿದೆ. ಆಯಾ ತಾಲೂಕಿನ ತಹಸೀಲ್ದಾರರು, ಗ್ರಾಮ ಲೆಕ್ಕಾಧಿಕಾರಿಗಳು, ರೆವಿನ್ಯೂ ಇನ್ಸ್ ಪೆಕ್ಟರ್ ಗಳು , ಕೃಷಿ ಸಹಾಯಕರು ಸೇರಿದಂತೆ ಕೆಳ ಹಂತದ ಅಧಿಕಾರಿಗಳು ಸಮಸ್ಯೆ ಇರುವ ಗ್ರಾಮಗಳಿಗೆ ತೆರಳಿ ವಾಸ್ತವ ಸ್ಥಿತಿ ತಿಳಿದುಕೊಳ್ಳಬೇಕು.
ಅದರ ಆಧಾರದ ಮೇಲೆ ಪರಿಹಾರ ಕಾಮಗಾರಿ ಕೈಗೊಳ್ಳಬೇಕು. ಜಾನುವಾರುಗಳಿಗೆ ಮೇವು ಅಗತ್ಯ ಇರುವ ಕಡೆ ಬ್ಯಾಂಕ್ ಸ್ಥಾಪನೆ ಮಾಡಬೇಕು. ಗೋಶಾಲೆ ತೆರೆಯಬೇಕು. ಔಷಧಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಈ ವರೆಗೆ 70 ಮೇವು ಬ್ಯಾಂಕ್ ಮತ್ತು 11 ಗೋಶಾಲೆಗಳನ್ನು ತೆರೆಯಲಾಗಿದೆ ಎಂದು ಮುಖ್ಯಮಂತ್ರಿಯವರು ವಿವರಿಸಿದರು. ಗೋಶಾಲೆ ಮತ್ತು ಮೇವು ಬ್ಯಾಂಕ್ ಗಳಿಗೆ ಇತ್ಯ ಭೇಟಿ ನೀಡುವಂತೆ ಪಶು ವೈದ್ಯರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
2015-16ನೇ ಸಾಲಿನಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಈ ಜಿಲ್ಲೆಗಳಿಗ 275 ಕೋಟಿ ರೂ. ಬಿಡುಗಡೆ ಮಾಡಿದೆ. ಅದರಲ್ಲಿ 175 ಕೋಟಿ ರೂ. ವೆಚ್ಚವಾಗಿದೆ. ಇತ್ತೀಚೆಗೆ 30 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯಿಸುವುದರ ಜೊತೆಗೆ ಖಾಸಗಿ ಬೋರವೆಲ್ ಗಳನ್ನೂ ಬಳಸಿಕೊಳ್ಳಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಕೇಂದ್ರಕ್ಕೆ ಮನವಿ
ಬರ ಪರಿಹಾರ ಕಾಮಗಾರಿಗಳಿಗೆ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೇಂದ್ರದ ಅಧಿಕಾರಿಗಳ ತಂಡವೂ ಅಧ್ಯಯನ ನಡೆಸಿ ಹೋಗಿದೆ. ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಮತ್ತು ಕೃಷಿ ಸಚಿವ ಕೃಷ್ಣ ಬೈರೇಗೌಡರೂ ಕೇಂದ್ರದ ಸಚಿವರನ್ನು ಭೇಟಿಯಾಗಿ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಮಹಾರಾಷ್ಟ್ರಕ್ಕೆ ನಿಯೋಗ
ಜೊತೆಗೆ ಕೃಷ್ಣಾ ಮತ್ತು ಭೀಮಾ ನದಿಗೆ ತಲಾ 2 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದೆ. ಇದಕ್ಕೆ ಅಲ್ಲಿಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಎಸ್, ಆರ್. ಪಾಟೀಲ್ ಅವರ ನೇತೃತ್ವದ ನಿಯೋಗ ಸಧ್ಯವೇ ಮಹಾರಾಷ್ಟ್ರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲಿದೆ ಎಂದು ಮುಖ್ಯಮಂತ್ರಿಯವರು ವಿವರಿಸಿದರು.
ದೂರು ದಾಖಲು ಸಾಕ್ಷಿ
ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿಯಲ್ಲಿ ದೂರು ದಾಖಲಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ದೂರು ದಾಖಲಿಸಲು ಅವಕಾಶ ಇಲ್ಲ ಎನ್ನುತ್ತಾರೆ. ಅದು ಸುಳ್ಳು ಎಂಬುದಕ್ಕೆ ದೂರು ದಾಖಲಾಗಿರುವುದೇ ಸಾಕ್ಷಿ. ತನಿಖೆಯಾಗಲಿ ಎಂದರು. ನಿಗಮ-ಮಂಡಳಿಗಳಿಗೆ ಎರಡು ದಿನಗಳಲ್ಲಿ ನಿರ್ದೇಶಕರ ನೇಮಕವಾಗಲಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.







