ಸ್ವಚ್ಛ ಭಾರತ್ ಅಭಿಯಾನಕ್ಕೆ ಕೆಜೋಡಿಸಲು ಕರೆ
‘ಗ್ರೀನ್ ಸಿಟಿ ಫೋರಂ’ನಿಂದ ಏಕಕಾಲಕ್ಕೆ ನಗರದಲ್ಲಿ ಸ್ವಚ್ಛತಾ ಕಾರ್ಯ

ಮಡಿಕೇರಿ, ಎ.3: ಅಡುಗೆ ಅನಿಲ ಸಿಲಿಂಡರ್‌ನ ಸಬ್ಸಿಡಿಯನ್ನು ಬಿಟ್ಟುಕೊಡುವ ಮೂಲಕ ಸ್ವಚ್ಛ ಭಾರತ್ ಅಭಿಯಾನಕ್ಕೆ ಸಂಪನ್ಮೂಲವನ್ನು ಕ್ರೋಡೀಕರಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದರೂ ಈ ಮಹತ್ವಾಕಾಂಕ್ಷೆಯ ಯೋಜನೆಗೆ ನಿರೀಕ್ಷಿಸಿದಷ್ಟು ಸ್ಪಂದನೆ ದೊರೆಯುತ್ತಿಲ್ಲವೆಂದು ಶಾಸಕ ಕೆ.ಜಿ. ಬೋಪಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.
ಗ್ರೀನ್ ಸಿಟಿ ಫೋರಂ ಸಂಘಟನೆ ನಗರದ ಎಲ್ಲ ಬಡಾವಣೆಗಳಲ್ಲಿ ಏಕಕಾಲಕ್ಕೆ ಆರಂಭಿಸಿದ ಸ್ವಚ್ಛತಾ ಕಾರ್ಯಕ್ಕೆ ಗಾಂಧಿ ಮೈದಾನದಲ್ಲಿ ಗಣ್ಯರು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಭಾರತವನ್ನು ಸ್ವಚ್ಛಗೊಳಿಸುವುದಕ್ಕಾಗಿ ಬೃಹತ್ ಅಭಿಯಾನದ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕಾರ್ಯಕ್ರಮ ರೂಪಿಸಿದ್ದಾರೆ. ಈ ಯೋಜನೆಗೆ ಸಂಪನ್ಮೂಲ ಕ್ರೋಡೀಕರಿಸಲು ಅಡುಗೆ ಅನಿಲದ ಸಹಾಯಧನ ಬಿಟ್ಟುಕೊಡುವಂತೆ ಪ್ರಧಾನಿಗಳು ಮನವಿ ಮಾಡಿದ್ದರೂ ಸ್ಪಂದನೆ ದೊರೆತಿಲ್ಲವೆಂದರು.
ಸಂಘಟನೆಗಳು ಸ್ವಚ್ಛತಾ ಅಭಿಯಾನವನ್ನು ನಿರಂತರಗೊಳಿಸಬೇಕೇ ಹೊರತು ಕೇವಲ ಪ್ರಚಾರ ಮತ್ತು ಭಾಷಣಕ್ಕೆ ಸೀಮಿತಗೊಳಿಸಬಾರದು. ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ತಮ್ಮನ್ನು ತೊಡಗಿಸಿಕೊಳ್ಳಬೆೇಕೆಂದು ಬೋಪಯ್ಯ ಕರೆ ನೀಡಿದರು.
ಸ್ವಚ್ಛತಾ ಜಾಗೃತಿ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಾಸ್ಟರ್ ಆರ್‌ಕೆಜಿಎಂಎಂ ಮಹಾಸ್ವಾಮೀಜಿ ಮಾತನಾಡಿ, ಪರಿಸರದ ಸ್ವಚ್ಛತೆಯಿಂದ ಆರೋಗ್ಯ ವೃದ್ಧಿಸುತ್ತದೆ ಎಂದರು. ಅತ್ಯಂತ ತಂಪಿನ ಹವಾಗುಣವಿದ್ದ ಕೊಡಗು ಇಂದು ಬಿಸಿಲಿನ ಬೇಗೆಯಿಂದ ಬೇಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಚ್ಛತಾ ಅಭಿಯಾನದ ಪ್ರಚಾರ ರಾಯಭಾರಿ ಮಿಸ್ ಇಂಡಿಯಾ ಫೈನಲಿಸ್ಟ್ ಹಾಗೂ ಮಿಸ್ ಕ್ಯಾಟ್ ವಾಕ್‌ನ ಪ್ರಶಸ್ತಿ ವಿಜೇತೆ ಪ್ರಾರ್ಥನಾ ಸುಬ್ರಮಣಿ ಮಾತನಾಡಿ, ಸ್ವಚ್ಛತೆಯಲ್ಲಿ ಮಡಿಕೇರಿ ನಗರ ರಾಷ್ಟ್ರದಲ್ಲೇ ಮಾದರಿಯಾಗಬೇಕೆಂದು ಕರೆ ನೀಡಿದರು.
ಮಡಿಕೆೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿದರು.
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ನಗರಸಭಾಧ್ಯಕ್ಷೆ ಶ್ರೀಮತಿ ಬಂಗೇರ, ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ, ಗ್ರೀನ್ ಸಿಟಿ ಫೋರಂ ಸಂಚಾಲಕ ಚೆಯ್ಯಂಡ ಸತ್ಯ, ಕಾರ್ಯದರ್ಶಿ ಐತಿಚಂಡ ರಮೇಶ್ ಉತ್ತಪ್ಪಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಸ್ವಚ್ಛಗೊಳಿಸಿದ ವಧು-ವರರು :
ಗೌಡ ಸಮಾಜದ ಬಳಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದ ಸಂದರ್ಭ ಮದುವೆ ಮನೆಯಲ್ಲಿದ್ದ ವರ ನವೀನ್ ಹಾಗೂ ವಧು ರಮ್ಯಾ ಜೋಡಿ ಸ್ವಯಂ ಪ್ರೇರಣೆಯಿಂದ ರಸ್ತೆಗಿಳಿದು ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಮೂಲಕ ಇತರರಿಗೆ ಮಾದರಿಯಾಗಿದ್ದು ವಿಶೇಷ. ಬಸ್ ನಿಲ್ದಾಣಗಳಲ್ಲಿ ಅಶುಚಿತ್ವ: ಜಿಲ್ಲಾಧಿಕಾರಿ ಅಸಮಾಧಾನ: ನಗರದ ಖಾಸಗಿ ಬಸ್ ನಿಲ್ದಾಣದ ಅಂಗಡಿ ಮಳಿಗೆಗಳ ಎದುರು ಎಲ್ಲೆಂದರಲ್ಲಿ ಕಸದ ಬುಟ್ಟಿಗಳನ್ನಿಟ್ಟು, ಅಶುಚಿತ್ವದ ವಾತಾವರಣ ಸೃಷ್ಟಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರೀನ್ ಸಿಟಿ ಫೋರಂ ನಡೆಸಿದ ಸ್ವಚ್ಛತಾ ಅಭಿಯಾನದ ಸಂದರ್ಭ ಭೇಟಿ ನೀಡಿದ ಅವರು, ಎಲ್ಲೆಂದರಲ್ಲಿ ಕಸದ ಬುಟ್ಟಿಗಳನ್ನಿಡುವುದು ಮತ್ತು ಸಾರ್ವಜನಿಕ ಪ್ರದೇಶದಲ್ಲಿ ತ್ಯಾಜ್ಯವನ್ನು ಎಸೆಯುವ ಮಳಿಗೆಗಳ ಪರವಾನಿಗೆಯನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ನಂತರ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದ ಜಿಲ್ಲಾಧಿಕಾರಿಗಳು ಅಶುಚಿತ್ವದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಸ್ ನಿಲ್ದಾಣದ ನಿರ್ವಾಹಕರಿಗೆ ಒಂದು ವಾರದ ಗಡುವು ನೀಡಿದ ಜಿಲ್ಲಾಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು.
ಗ್ರೀನ್ ಸಿಟಿ ಫೋರಂ ಕರೆ ನೀಡಿದ್ದ ಸ್ವಚ್ಛತಾ ಅಭಿಯಾನಕ್ಕೆ ನಗರದ 23 ವಾರ್ಡ್‌ಗಳಲ್ಲಿ ಉತ್ತಮ ಸ್ಪಂದನೆ ದೊರೆಯಿತು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಕಸವನ್ನು ತೆರವುಗೊಳಿಸಿದ್ದಲ್ಲದೆ, ಸಾರ್ವಜನಿಕರಲ್ಲಿ ಸ್ವಚ್ಛತಾ ಜಾಗೃತಿಯನ್ನು ಮೂಡಿಸಿದರು.







