‘ಮಂಕುತಿಮ್ಮನ ಕಗ್ಗ’ ಆಧುನಿಕ ಕಾಲದ ಉಪನಿಷತ್ತು: ಅ.ರಾ.ಮಿತ್ರ

ಬೆಂಗಳೂರು, ಎ.3: ಹಿರಿಯ ಸಾಹಿತಿ ಡಿ.ವಿ. ಗುಂಡಪ್ಪ (ಡಿವಿಜಿ)ನವರ ‘ಮಂಕುತಿಮ್ಮನ ಕಗ್ಗ’ವು ಭವಿಷ್ಯದಲ್ಲಿ ನಡೆಯುವಂತಹ ತಲ್ಲಣಗಳನ್ನು ಮೊದಲೆ ಅರ್ಥೈಸಲಾಗಿದೆ. ಈ ಕಗ್ಗ ಆಧುನಿಕ ಕಾಲದ ಉಪನಿಷತ್ತು ಎಂದು ಹಿರಿಯ ಸಾಹಿತಿ ಅ.ರಾ.ಮಿತ್ರ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹೊಂಬಾಳೆ ಪ್ರತಿಭಾರಂಗ ಆಯೋಜಿಸಿದ್ದ ಕವಿದನಿ-ಡಿವಿಜಿ ಕವಿತೆಗಳ ಓದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಿವಿಜಿಯವರ ಮಂಕುತಿಮ್ಮನ ಕಗ್ಗವು ಜಗಕ್ಕೆ ಹಾಸ್ಯದ ಮೂಲಕವೇ ನೀತಿಪಾಠ ಹೇಳುತ್ತದೆ. ಅಲ್ಲದೆ, ಭವಿಷ್ಯದಲ್ಲಿ ಸಂಭವಿಸುವ ತಲ್ಲಣಗಳು ಮತ್ತು ಮಾನವೀಯ ಸಂಬಂಧ ಗಳಲ್ಲಿನ ತೊಡಕುಗಳ ಬಗ್ಗೆ ಪ್ರತಿಪಾದಿಸಿದ್ದರು. ಹೀಗಾಗಿ ಈ ಕಗ್ಗ ಆಧುನಿಕ ಕಾಲದ ಉಪನಿಷತ್ತು ಎಂದು ಗುರುತಿಸಬಹುದು ಎಂದು ಹೇಳಿದರು.
ಡಿವಿಜಿ ಒಂದು ವಿಶ್ವಕೋಶವಿದ್ದಂತೆ. ಅನೇಕ ಭಾಷೆಗಳನ್ನು ಬಲ್ಲ ಅವರು ಆಂಗ್ಲ ಭಾಷೆಯಲ್ಲಿ ಆಂಗ್ಲ ಪಂಡಿತರನ್ನೇ ನಾಚಿಸುವಂತಹ ಪ್ರೌಢಿಮೆಯನ್ನು ಕರಗತಗೊಳಿಸಿಕೊಂಡಿದ್ದರು. ಕನ್ನಡದಲ್ಲಿ ಪ್ರಾಸವನ್ನು ಬಿಟ್ಟು ಕವಿತೆಗಳನ್ನು ರಚಿಸಿದ ಮೊದಲ ಕವಿ ಡಿವಿಜಿ ಎಂದು ಹೇಳಿದ ಅವರು, ಕನ್ನಡ ಸಾಹಿತ್ಯದ ಹಳೆಯ ಪರಂಪರೆಯನ್ನು ಪ್ರಜ್ವಲಿಸುವಂತಹ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸುವ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಡಾ.ನಾ.ಗೀತಾಚಾರ್ಯ ಮಾತನಾಡಿ, ದಕ್ಷಿಣ ಭಾರತದ ಪ್ರಸಿದ್ಧ ಕವಿಗಳಾದ ಸರ್ವಜ್ಞ, ತಿರುವಳ್ಳವರ್ ಮತ್ತು ವೇಮಣ್ಣರ ಸಾಲಿಗೆ ಕವಿ ಡಿವಿಜಿ ಸೇರುತ್ತಾರೆ. ಇವರ ತ್ರಿಪದಿಗಳು ಇಂದು ನುಡಿಗಟ್ಟು ಮತ್ತು ಗಾದೆಗಳಾಗಿ ಹೆಚ್ಚು ಪ್ರಚಲಿತವಾಗಿವೆ. ಅಲ್ಲದೆ, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತನ್ನ ಬಜೆಟ್ ಮಂಡನೆ ವೇಳೆ ‘ಕಗ್ಗ’ವನ್ನು ಉಲ್ಲೇಖಿಸಿರುವುದು ಗಮನಾರ್ಹ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಿವಿಜಿಯವರ ಕವಿತೆಗಳನ್ನು ಡಾ.ನಾ.ಗೀತಾಚಾರ್ಯ, ಅ.ರಾ.ಮಿತ್ರ, ಗಮಕ ಕಲಾವಿದ ಡಾ.ಕೆ.ಶ್ರೀನಿವಾಸ್ ವಾಚಿಸಿದರು. ಹೊಂಬಾಳೆ ಪ್ರತಿಭಾರಂಗದ ಎಚ್.ಫಲ್ಗುಣ ಸೇರಿದಂತೆ ಇತರರು ಉಪಸ್ಥಿತರಿದ್ದರು.





