ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡ ಕಾಗೋಡು ತಿಮ್ಮಪ್ಪ
ವೀಡಿಯೊ ಕಾನ್ಫರೆನ್ಸ್ ವೀಕ್ಷಣಾ ಕಾರ್ಯಕ್ರಮ

ಸಾಗರ,ಎ.3: ಶನಿವಾರ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ನಡೆದ ವೀಡಿಯೊ ಕಾನ್ಫರೆನ್ಸ್ ವೀಕ್ಷಣಾ ಕಾರ್ಯಕ್ರಮದಲ್ಲಿ ಗ್ರಾಪಂ ಪಿಡಿಒಗಳಿಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಕಳೆದ ಬಾರಿ ಮಳೆ ಕಡಿಮೆ ಇರುವುದರಿಂದ ತಾಲೂಕಿನಲ್ಲಿ ಬರದ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಗ್ರಾಮಾಂತರ ಪ್ರದೇಶದ ಜನರಿಗೆ ಉದ್ಯೋಗಖಾತ್ರಿ ಯೋಜನೆ ಸಂಜೀವಿನಿಯಿದ್ದಂತೆ. 35 ಪಂಚಾಯತ್ ಅಧ್ಯಕ್ಷರಲ್ಲಿ 10 ಜನರು ಮಾತ್ರ ಹಾಜರಿದ್ದಾರೆ. ಹೀಗಾದರೆ ಹೇಗೆ? ಬಾರದೇ ಇರುವ ಅಧ್ಯಕ್ಷರ ಮೇಲೆ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ಒಬ್ಬ ವ್ಯಕ್ತಿ ನೂರು ದಿನ ಕೆಲಸ ಮಾಡಿದರೆ 39 ಸಾವಿರ ರೂ. ಆತನಿಗೆ ಸಿಗುತ್ತದೆ. ಆದ್ದರಿಂದ ಉದ್ಯೋಗ ಖಾತ್ರಿ ಕೆಲಸಕ್ಕೆ ಜನ ಬರುತ್ತಿಲ್ಲ ಎಂದು ಅಧಿಕಾರಿಗಳೇ ಭಾಷಣ ಬಿಗಿಯುತ್ತಾರೆ. ಇನ್ನು ಶಾಸಕರು, ಸಚಿವರಿಗೆ ಈ ಯೋಜನೆ ಬೇಡವಾಗಿದೆ. ಸ್ವಾತಂತ್ರ್ಯಾ ನಂತರ ಗಂಡು-ಹೆಣ್ಣಿಗೆ ಸಮಾನ ವೇತನ ನೀಡುವ ಇಂತಹ ಯೋಜನೆಯನ್ನು ಬಳಸಿಕೊಳ್ಳುವಲ್ಲಿ ನಾವು ಹಿಂದೆ ಇದ್ದೇವಲ್ಲ ಎಂದು ವ್ಯಥೆಯಾಗುತ್ತಿದೆ. ಒಬ್ಬರಿಗೆ 224 ರೂ.ನೀಡಲಾಗುತ್ತದೆ. ಊರಿನ ಕೆರೆ, ಕಟ್ಟೆ, ಕೃಷಿಹೊಂಡ ಎಲ್ಲವನ್ನೂ ನಿರ್ಮಾಣ ಮಾಡಿಕೊಳ್ಳುವ ಯೋಜನೆಯ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದರು.
ಸಾಗರ ತಾಲೂಕಿನಲ್ಲಿ 26,780 ಜನ ಉದ್ಯೋಗಖಾತ್ರಿ ಜಾಬ್ ಕಾರ್ಡ್ ಹೊಂದಿದವರಿದ್ದಾರೆ. ಆದರೆ ಕೆಲಸ ಮಾಡು ತ್ತಿರುವವರು ಶೇ.47 ಮಾತ್ರ. ಈ ವರ್ಷದ ಕ್ರಿಯಾಯೋಜನೆಯನ್ನು ಎಲ್ಲ್ಲ ಪಂಚಾಯತ್‌ಗಳೂ ತಕ್ಷಣ ಮಾಡಿ ಕಳಿಸಿ. ಜನರಿಗೆ ಜಾಗೃತಿ ಮೂಡಿಸುವುದೇ ಬಹಳ ಮುಖ್ಯವಾಗಿರುವಂಥದ್ದು.
ೆರೆಗಳು ಬತ್ತಿರುವುದರಿಂದ ಹೂಳು ತೆಗೆಯಲು ಬಹಳ ಅನುಕೂಲವಾಗುತ್ತದೆ. ಉದ್ಯೋಗ ಖಾತ್ರಿಯಲ್ಲಿ ಕೆಳದಿ ಕೆರೆಯಂತಹ ದೊಡ್ಡ ಕೆರೆಗಳನ್ನೂ ಸಹ ಬಳಸಿಕೊಳ್ಳ ಲಾಗಿದೆ. ಇರುವ ಕೆರೆಗಳನ್ನು ಉಳಿಸಿಕೊಳ್ಳುವಲ್ಲಿ ಪ್ರಯತ್ನ ಮಾಡಿ. ಕ್ರಿಯಾಯೋಜನೆಯನ್ನು ತಕ್ಷಣ ತಯಾರಿಸಿ ಕೊಡದಿರುವವರ ಮೇಲೆ ನಿರ್ದಾ ಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಆದೇಶ ನೀಡಿದರು. ಉ
್ಯೋಗಖಾತ್ರಿ ಕೆಲಸ ಆರಂಭವಾಗುತ್ತಿದ್ದಂತೆ ಪ್ರತೀ ಎರಡು ಪಂಚಾಯತ್‌ಗಳನ್ನು ಆಯ್ಕೆ ಮಾಡಿಕೊಂಡು ಅಧಿಕಾರಿಗಳು ಆ ಸ್ಥಳಕ್ಕೆ ಹೋಗಿ ಈ ಯೋಜನೆಯ ಮಹತ್ವ ತಿಳಿಸಬೇಕು. ಸಂಖ್ಯೆ ಕಡಿಮೆಯಾದರೆ ಮಧ್ಯಾಹ್ನ ಹೋಳಿಗೆ ಊಟವನ್ನೂ ಹಾಕಿ ಕಾರ್ಯಾಗಾರ ಮಾಡಿರಿ. ನಾನೂ ಬರುತ್ತೇನೆ. ಕೇಂದ್ರ ಸರಕಾರದ ಈ ಯೋಜನೆಯನ್ನು ಬಳಸಿಕೊಳ್ಳುವಲ್ಲಿ ಉದಾಸೀನ ಮಾಡಬೇಡಿ. ಇಚ್ಛಾಶಕ್ತಿ ಮೆರೆಯಿರಿ. ರಾಜ್ಯಕ್ಕೆ ಪಾಠ ಹೇಳುವ ಸ್ಥಾನದಲ್ಲಿ ನನ್ನನ್ನು ಕೂರಿಸಿದ್ದಾರೆ. ನಮ್ಮಲ್ಲೇ ಮಾದರಿ ಕೆಲಸ ಆಗದಿದ್ದರೆ ಹೇಗೆ? ಆತ್ಮಾವಲೋಕನ ಮಾಡಿಕೊಳ್ಳಿ ಎಂದರು. ಈ ಸಂದರ್ಭದಲ್ಲಿ ನಗರದ ಕಂಬಳೆಕೇರಿಯ ಸಾಬಣ್ಣ ಅವರಿಗೆ ಮುಖ್ಯಮಂತ್ರಿಗಳ ಪರಿಹಾರನಿಧಿಯಿಂದ 42 ಸಾವಿರ ರೂ. ಪರಿಹಾರ ಧನದ ಚೆಕ್ ವಿತರಣೆ ಮಾಡಿದರು. ನಗರಸಭೆ ಅಧ್ಯಕ್ಷ ಆರ್.ಗಣಾಧೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಶ್ರೀನಾಥ್, ಸದಸ್ಯ ಸುಂದರಸಿಂಗ್, ಎಲ್.ಟಿ.ತಿಮ್ಮಪ್ಪ, ಆನಂದನಾಯಕ್ ಮತ್ತಿತರರು ಉಪಸ್ಥಿತರಿದ್ದರು.







